

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿನ, ಹಿರಿಯ ಕವಿ ದಿ.ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿವಾಸವನ್ನು ರಾಜ್ಯ ಸರ್ಕಾರ ಸ್ಮಾರಕವಾಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಆಗ್ರಹಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಹಿರಿಯ ಕವಿ ದಿ.ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಹೊದಿಗೆರೆ ಶಾನಭೋಗ ವೆಂಕಟೇಶಮೂರ್ತಿ ಅವರು ಆರು ದಶಕಗಳಿಂದ ಸಾಹಿತ್ಯ ಕೃಷಿ, ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗಿಕೊಂಡು ನಾಡಿನ ಮೇರು ಸಾಹಿತಿಗಳ ಪಂಕ್ತಿಯಲ್ಲಿ ಇದ್ದವರು. ಅವರ ಭಾವಗೀತೆಗಳು ಜನಮನದಲ್ಲಿ ವಿಶೇಷ ಸ್ಥಾನ ಪಡೆದಿವೆ. ಹಾಗಾಗಿಯೇ ಅವರು ಭಾವಗೀತೆಗಳ ಕವಿ ಎಂದೇ ಹೆಸರಾಗಿದ್ದಾರೆ ಎಂದು ಬಣ್ಣಿಸಿದರು.
‘ಬುದ್ಧ ಚರಣ’ವೆಂಬ ಕಾವ್ಯ ಸೇರಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಮೌಲಿಕ ಹಾಗೂ ಚಿರಕಾಲ ಬಾಳುವಂತಹ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿರುವ ಎಚ್‌ಎಸ್‌ವಿ ನಮ್ಮ ಜಿಲ್ಲೆಯವರು ಎಂಬುದೇ ಹೆಮ್ಮೆ ಎಂದರು.
ಸುಗಮ ಸಂಗೀತ, ಕಿರುತೆರೆ, ಚಲನಚಿತ್ರ ರಂಗದಲ್ಲೂ ಇವರ ಸಾಹಿತ್ಯ ಗುರುತಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ವೆಂಕಟೇಶಮೂರ್ತಿ ಅವರ ಕೃತಿಗಳ ಕುರಿತಾಗಿ ಜಿಲ್ಲಾ ಕಸಾಪದಿಂದ ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ ಅವರ ಸಾಹಿತ್ಯದ ಪದ ಪದದಲ್ಲೂ ಪ್ರೀತಿ, ಮಮತೆ, ವಾತ್ಸಲ್ಯ ಪ್ರತಿಬಿಂಬಿಸುತ್ತವೆ. ದೇಶದ ಜ್ವಲಂತ ವಿಷಯಗಳು, ದೇಶಪ್ರೇಮ, ದೇಶದ ಅಖಂಡತೆ ಅವರ ಸಾಹಿತ್ಯದಲ್ಲಿ ಹೊರಸೂಸುತ್ತಿತ್ತು ಎಂದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಕ.ರಾಘವೇಂದ್ರ ನಾಯರಿ ಪ್ರಾಸ್ತಾವಿಕ ಮಾತನಾಡಿ, 2020 ರಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 2011 ರಲ್ಲಿ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ 4 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಅವರಿಗೆ ದೊರಕಿತ್ತು ಎಂದು ಹೇಳಿದರು.
ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿ ಎಚ್‌ಎಸ್‌ವಿ ಅವರು ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವನ್ನು ನಾವು ಓದುವ ಮೂಲಕ ಅವರನ್ನು ಸದಾಕಾಲ ಜೀವಂತವಾಗಿರಿಸಬಹುದು ಎಂದು ಹೇಳಿದರು.
ಉಪನ್ಯಾಸಕ ಡಾ.ಎನ್.ಕರಿಬಸಪ್ಪ, ಸಾಹಿತಿ ಜಿ.ಕೆ.ಕುಲಕರ್ಣಿ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಪತ್ರಕರ್ತೆ ಸುನೀತಾ ಪ್ರಕಾಶ್, ವಿಶ್ರಾಂತ ಉಪನ್ಯಾಸಕಿ ಎಸ್.ಎಂ.ಮಲ್ಲಮ್ಮ, ಸಾಹಿತಿ ಎಚ್.ಎನ್.ಶಿವಕುಮಾರ್, ಎಸ್.ಎಸ್. ಸಿದ್ಧರಾಜು, ಉಪನ್ಯಾಸಕಿ ಉಷಾ, ಲೇಖಕಿ ಟಿ. ಶೈಲಜಾ, ಸತ್ಯಭಾಮಾ ಮಂಜುನಾಥ್, ಸಿರಿಗೆರೆ ನಾಗರಾಜ್ ಹಾಗೂ ಕಸಾಪ ಪದಾಧಿಕಾರಿಗಳಿದ್ದರು. ಸಿ.ಕೆ.ರುದ್ರಾಕ್ಷಿ ಬಾಯಿ, ಗಿರಿಜಮ್ಮ, ಉಮಾದೇವಿ ಅವರು ಎಚ್‌ಎಸ್ವಿ ರಚಿಸಿದ ಕವಿತೆಗಳನ್ನು ಹಾಡಿ ಗೌರವ ಸಲ್ಲಿಸಿದರು.