

ದಾವಣಗೆರೆ: ಬಸವ, ಅಂಬೇಡ್ಕರ್ ವಸತಿ ಯೋಜನೆ ಹಾಗೂ ಸ್ಲಂ ಬೋರ್ಡ್‌ನಡಿ ದಾವಣಗೆರೆ ನಗರಕ್ಕೆ 500 ಹಾಗೂ ದಾವಣಗೆರೆ ದಕ್ಷಿಣ ಭಾಗದಲ್ಲಿ 1 ಸಾವಿರ ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಫಲಾನುಭವಿಗಳು ಇದರ ಲಾಭ ಪಡೆಯಬೇಕು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿಬಾಯಿಫುಲೆ ಮಹಿಳಾ ಸಂಘಟನೆ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕೊಳೆಗೇರಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ, ನಿಗದಿತ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡಲಿದೆ. ಇದಕ್ಕೆ ಫಲಾನುಭವಿಗಳು ಕೂಡ ಸಣ್ಣ ಮೊತ್ತ ಹಾಕಬೇಕಿದೆ. ಸ್ವಂತ ನಿವೇಶನ ಹೊಂದಿದವರು ನಗರಪಾಲಿಕೆಗೆ ಅರ್ಜಿ ಸಲ್ಲಿಸಬಹುದು. ಬಡಾವಣೆ ನಿರ್ಮಾಣಕ್ಕೆ ಖಾಸಗಿ ಜಮೀನುಗಳ ಬೆಲೆ ಗಗನಕ್ಕೇರಿವೆ. ಹೀಗಾಗಿ ಸರ್ಕಾರದ ವಸತಿ ಯೋಜನೆಗಳ ಪ್ರಯೋಜನ ಪಡೆಯುವುದು ಸೂಕ್ತ ಎಂದು ಹೇಳಿದರು.
ಈ ಹಿಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಧಿಯಲ್ಲಿ 15 ಸಾವಿರ ಆಶ್ರಯ ಮನೆಗಳನ್ನು ವಿತರಿಸಲಾಗಿತ್ತು. ಅವನ್ನು ಕೆಲವರು ಮಾರಾಟ ಮಾಡಿಕೊಂಡರು. ಆಶ್ರಯ ಮನೆ ಅಥವಾ ನಿವೇಶನಗಳನ್ನು ಹೆಣ್ಣುಮಕ್ಕಳ ಹೆಸರಲ್ಲಿ ನೋಂದಣಿ ಮಾಡಿಸಬೇಕು. ಹೀಗಾದರೆ ಮಾರಾಟಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ಕೊಳೆಗೇರಿ ಜನರಲ್ಲಿ ಅನುಕೂಲತೆ ಕಡಿಮೆ. ಹೀಗಗಿ ಅಂತಹ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ. ಮಕ್ಕಳನ್ನು ಕೂಲಿ, ಬೀಡಿ ಕಟ್ಟುವ ಕೆಲಸಕ್ಕೆ ಹಚ್ಚದೇ ಅವರ ವ್ಯಾಸಂಗಕ್ಕೆ ಪಾಲಕರು ಉತ್ತೇಜನ ನೀಡಬೇಕು ಎಂದು ಹೇಳಿದರು.
ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಇಮ್ತಿಯಾಜ್ ಆರ್. ಮಾನ್ವಿ ಪ್ರಾಸ್ತಾವಿಕ ಮಾತನಾಡಿ, ಸ್ಲಂ ಜನರು, ಕೂಲಿ ಕಾರ್ಮಿಕರ ಮಕ್ಕಳು ಆರ್ಥಿಕ ಸಮಸ್ಯೆ ನಡುವೆಯೇ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಪಡೆದಿರುವುದು ಸಾಧನೆಯಾಗಿದೆ. ಮಕ್ಕಳು ಓದನ್ನು ಅರ್ಧಕ್ಕೆ ನಿಲ್ಲಿಸದೇ ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಅಭಿಲಾಷೆೆಯಿಂದ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕೊಳೆಗೇರಿ ನಿವಾಸಿಗಳು, ವಸತಿ ಮತ್ತು ನಿವೇಶನ ರಹಿತರಿಗೆ ಶಾಸಕರು ತಮ್ಮ ಅವಧಿಯಲ್ಲಿ ಸ್ವಂತ ಮನೆ ಕೊಡಿಸಬೇಕು. ಹಂಚಿಕೆಯಾದ ಹಕ್ಕುಪತ್ರಗಳಿಗೆ ನೋಂದಣಿ ಮಾಡಿಸಲು ಗಮನ ಹರಿಸಬೇಕೆಂದು ಮನವಿ ಮಾಡಿದರು. ಆಗುವಂತೆ ಗಮನ ಹರಿಸಬೇಕು.
ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ಸ್ಲಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆಪಿಸಿಸಿ ಸಂಚಾಲಕ ಎಸ್.ಎಲ್. ಆನಂದಪ್ಪ, ಸ್ಲಂ ಜನಾಂದೋಲನದ ಅಧ್ಯಕ್ಷ ಎಂ. ಶಬ್ಬೀರ್‌ಸಾಬ್, ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷೆ ಮಂಜುಳಾ, ಶಂಷಿದಾ ಬಾನು, ನರಸಿಂಹಮೂರ್ತಿ, ರೇಣುಕಾ ಯಲ್ಲಮ್ಮ ಇತರರಿದ್ದರು.