

ದಾವಣಗೆರೆ: ದಾವಣಗೆರೆ ಪಾಲಿಕೆ ವ್ಯಾಪ್ತಿಯ ಕೊಳೆಗೇರಿಗಳ ಅರ್ಹ ಫಲಾನುಭವಿಗಳ ವಸತಿ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಕೊಳೆಗೇರಿ ಜನರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆ ಉದ್ಘಾಟಿಸಿ ಮಾತನಾಡಿದರು.
ದೊಡ್ಡಬಾತಿ ಬಳಿ 4350 ನಿವೇಶನಗಳು ಅರ್ಹ ಫಲಾನುಭವಿಗಳಿಗೆ ದೊರೆತಿಲ್ಲ ಎಂಬುದಾಗಿ ಲೋಕಾಯುಕ್ತ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ನೈಜತೆ ಮತ್ತು ಬೇಡಿಕೆ ಸಮೀಕ್ಷೆ ಮಾಡಲು ಸೂಚನೆಯಿದ್ದು ಕೊಳೆಗೇರಿ ಜನರ 1500 ನಿವೇಶನಗಳ ಬೇಡಿಕೆ ಪರಿಗಣಿಸಲು ಅವಕಾಶವಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಸ್ಲಂ ಜನರಿಗೆ ವಸತಿ ಸಮಸ್ಯೆ ಜ್ವಲಂತವಾಗಿದೆ. 20 ವರ್ಷದ ಹಿಂದೆ ನಿವೇಶನ ನೀಡುವಷ್ಟು ಸರಳ ವ್ಯವಸ್ಥೆ ಈಗಿಲ್ಲ. ನಗರಪಾಲಿಕೆ ವ್ಯಾಪ್ತಿಯಲ್ಲಿ ಜಿ ಪ್ಲಸ್1 ಮಾದರಿಯಲ್ಲಿ ವಸತಿ ಸಮಚ್ಛಯ ನಿರ್ಮಿಸಲು ಅವಕಾಶವಿದೆ ಎಂದು ತಿಳಿಸಿದರು.
ಕೊಳೆಗೇರಿಗಳಲ್ಲಿ ಕುಡಿವ ನೀರು, ಮಹಿಳಾ ಶೌಚಗೃಹ, ಬೀದಿದೀಪ, ಒಳಚರಂಡಿ ಸಮಸ್ಯೆಗಳನ್ನು ನಗರಪಾಲಿಕೆಯ ಎಸ್‌ಎಫ್‌ಸಿ ಅನುದಾನದಲ್ಲಿ ಪರಿಹರಿಸಲು ಆದ್ಯತೆ ನೀಡಲಾಗುವುದು. ಮಹಿಳೆಯರಿಗಾಗಿ ಸಮುದಾಯ ಶೌಚಗೃಹಗಳನ್ನು ನಿರ್ಮಾಣದ ಜತೆಗೆ ಸಮಸ್ಯೆಗಳ ಚರ್ಚೆಗೆ ಫೆಬ್ರವರಿ ಅಂತ್ಯಗೊಳಗಾಗಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಪಾಲಿಕೆ ವ್ಯಾಪ್ತಿಯ 50 ಕೊಳೆಗೇರಿಗಳಿದ್ದು, ನಗರಪಾಲಿಕೆ ಸಾಮಾನ್ಯ ಅನುದಾನದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಹಕ್ಕುಪತ್ರಗಳಿಲ್ಲದ ಕುಟುಂಬಗಳ ಸಮೀಕ್ಷೆ ಮಾಡಿ 535 ಫಲಾನುಭವಿಗಳಿಗೆ ಹಕ್ಕಪತ್ರ ಕಲ್ಪಿಸಿ ಪಿಐಡಿ ನೀಡಲಾಗಿದೆ ಎಂದರು.
ರಾಮಕೃಷ್ಣ ಹೆಗಡೆ ನಗರದಿಂದ ಸ್ಥಳಾಂತರಿಸಿದ 400 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ಫಲಾನುಭವಿಗಳ ವಂತಿಕೆಯನ್ನು ನಗರಪಾಲಿಕೆಯೇ ನೀಡಲಿದೆ. ಖಾಸಗಿ ಮಾಲೀಕತ್ವದ ಸ್ಲಂಗಳಲ್ಲಿ ಹಕ್ಕುಪತ್ರ ನೀಡಲು ಸಂಘಟನೆಯು ಮನವಿ ಸಲ್ಲಿಸಿದ್ದು ವಿಶೇಷ ಪ್ರಕರಣ ಎಂಬುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಫೆ. 3ರಿಂದ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿರುವ ಕುಟುಂಬಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಎ ಖಾತೆ ಮತ್ತು ಬಿ ಖಾತೆ ನೀಡಲಾಗುವುದು. ಇದರಿಂದ ನಗರದ 15 ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ವೆಂಕಾಭೋವಿ ಕಾಲನಿ, ಆಜಾದ್ ನಗರ ಕೊಳೆಗೇರಿಗಳಲ್ಲಿ ಕುಡಿವ ನೀರಿಗೆ ಯುಜಿಡಿ ನೀರು ಸೇರ್ಪಡೆಯಾಗಿದೆ, ಬಾಷಾ ನಗರ, ಶಿವನಗರದಲ್ಲಿ ಮಹಿಳಾ ಶೌಚಗೃಹಗಳ ಸಮಸ್ಯೆ ಇದೆ. ಅನೇಕ ಕಡೆ ಯುಜಿಡಿ ನೀರು ರಸ್ತೆಗಳಲ್ಲಿ ಹರಿಯುತ್ತಿದೆ.
ಕಳೆದ ಆರು ವರ್ಷಗಳಿಂದ ನಿವೇಶನರಹಿತರಿಗೆ ಮನೆಗಳು ಸಿಗದೆ ಬಾಡಿಗೆ ಮನೆಗಳಲ್ಲಿ ಅನೇಕರು ವಾಸಿಸುತ್ತಿದ್ದಾರೆ. ಅನೇಕ ಕಡೆ ಯುಜಿಡಿ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಕೊಳೆಗೇರಿಗಳಲ್ಲಿ ಹಕ್ಕುಪತ್ರ ಪಡೆದವರಿಗೆ ನೋಂದಣಿ ಮಾಡಿಸಿ ಇ-ಖಾತೆ ಮಾಡಿಸಿಕೊಡಬೇಕು ಎಂಬುದಾಗಿ ಮನವಿಗಳು ಸಲ್ಲಿಕೆಯಾದವು.
ಕಾರ್ಯಕ್ರಮದಲ್ಲಿ ಮೇಯರ್ ಕೆ. ಚಮನ್ ಸಾಬ್, ಕೆಪಿಸಿಸಿ ಸಂಚಾಲಕ ಎಸ್.ಎಲ್.ಆನಂದಪ್ಪ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಟಿ.ಎಂ. ನಾಗರಾಜ್, ಸ್ಲಂ ಜನಾಂದೋಲನ ಕರ್ನಾಟಕ ಅಧ್ಯಕ್ಷ ಎಂ. ಶಬ್ಬೀರ್ ಸಾಬ್, ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕ ಯಲ್ಲಮ್ಮ, ನಿವೇಶನ ರಹಿತ ಹೋರಾಟ ಸಮಿತಿ ಅಧ್ಯಕ್ಷೆ ಮಂಜುಳಾ, ಮಂಡಕ್ಕಿ ಭಟ್ಟಿ ಮಾಜಿ ಅಧ್ಯಕ್ಷ ಮಹ್ಮದ್ ಹರ್ಷದ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಸುಧಾ ಇದ್ದರು.
---