

ದಾವಣಗೆರೆ: ಹೊರವಲಯದ ಕೈಗಾರಿಕಾ ವಸಾಹತು ಪ್ರದೇಶದ ರವೀಂದ್ರನಾಥ್ ಬಡಾವಣೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು ಮಾಡಿತು. ತಹಸೀಲ್ದಾರ್ ಎಂ.ಬಿ. ಅಶ್ವತ್ಥ ನೇತೃತ್ವದಲ್ಲಿ ಅಲ್ಲಿನ 36 ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ಮೂರು ಕೆಎಸ್‌ಆರ್‌ಪಿ ತುಕಡಿ, ಪಾಲಿಕೆ ತ್ಯಾಜ್ಯ ತುಂಬುವ ಕಂಟೇನರ್, ಟ್ರಾೃಕ್ಟರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್, ತೆರವು ಕಾರ್ಯಾಚರಣೆ ನಡೆಸಿದರು. ನಾವು ಕೋರ್ಟ್ ಆದೇಶ ಪಾಲಿಸುತ್ತಿದ್ದೇವೆ, ಅಡ್ಡಿಪಡಿಸಬೇಡಿ ಎಂದೂ ಹೇಳಿದರು.
ಪೊಲೀಸರ ಬಂದೋಬಸ್ತ್ ನಡುವೆಯೇ ಕಾರ್ಯಾಚರಣೆ ನಡೆಸಲಾಯಿತು. ಜೆಸಿಬಿ ಮನೆಗಳ ಗೋಡೆಗಳನ್ನು ಒಡೆದು ಹಾಕುತ್ತಿದ್ದರೆ ಮನೆಯ ತಗಡುಶೀಟುಗಳು, ಟಿವಿ, ಫ್ರಿಜ್, ಅಲ್ಮೆರಾ, ಹಾಸಿಗೆ, ಪಾತ್ರೆ ಸಾಮಗ್ರಿ, ಪೀಠೋಪಕರಣಗಳು ಬೀದಿಗೆ ಬಂದವು. ನಿವಾಸಿಗಳೇ ತಮ್ಮ ಸರಂಜಾಮುಗಳನ್ನು ಹೊರಗೆ ತರುವ ಪ್ರಯತ್ನ ನಡೆಸಿದರು.
ಐದು ವರ್ಷದಿಂದ ಸಚಿವರ ಮನೆ ಅಲೆದಾಡಿದ್ದೇವೆ. ಅವರೂ ಸಹ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ತೆರವುಗೊಳಿಸುವ ಭರವಸೆ ನೀಡಿದ್ದರು. ಆದರೆ ಅವರು ಊರಲ್ಲಿ ಇಲ್ಲದ ಸಮಯ ನೋಡಿಕೊಂಡು ಅಧಿಕಾರಿಗಳು ಮನೆ ತೆರವು ಮಾಡಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಕೂಲಿ ಕೆಲಸ ಮಾಡುವವರು, ಆಟೋ ಚಾಲಕರು, ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕುವವರಿದ್ದಾರೆ. ನಾವೇ ಇಲ್ಲಿಂದ ತೆರವುಗೊಳ್ಳಲು ಅ. 15ರವರೆಗೆ ಅವಕಾಶ ಕೇಳಿದ್ದೆವು. ಈಗ ಮಳೆಗಾಲ. ದಿಢೀರನೇ ಕಾರ್ಯಾಚರಣೆ ನಡೆಸಿದರೆ ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು ಎಂದೂ ಅಸಮಾಧಾನ ಹೊರಹಾಕಿದರು. ಸ್ಥಳಕ್ಕೆ ಡಿಸಿ ಬರಬೇಕೆಂದೂ ಆಗ್ರಹಿಸಿದರು.
ಕಾರ್ಯಾಚರಣೆ ವೇಳೆ ಮನೆಯ ಸರಂಜಾಮುಗಳನ್ನು ಹೊರಹಾಕುತ್ತಿದ್ದಂತೆ ಸ್ಥಳೀಯ ಮಹಿಳೆಯರು ಕಣ್ಣೀರು ಹಾಕಿದರು. ವಿರೋಧ ವ್ಯಕ್ತಪಡಿಸಿದ ಕೆಲವರನ್ನು ಪೊಲೀಸರು ಎಳೆದಾಡಿದರು. ಕೆಲವರು ಸ್ಥಳದಲ್ಲೇ ಕೂತು ಧರಣಿ ನಡೆಸಲು ಯತ್ನಿಸಿದರು.
ಸ್ಥಳಕ್ಕೆ ಧಾವಿಸಿದ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ಕೂಡ ಬಡವರನ್ನು ಒಕ್ಕಲೆಬ್ಬಿಸಬೇಡಿ. ಸಮಯಾವಕಾಶ ನೀಡಿದರೆ ಅವರೇ ತೆರವುಗೊಳ್ಳುತ್ತಾರೆ ಎಂದು ಹೇಳಿದರಾದರೂ ಪೊಲೀಸರು ಅವರನ್ನು ಎಳೆದಾಡಿದರು. ಆಗ ತಹಸೀಲ್ದಾರ್, ಪೊಲೀಸರೊಂದಿಗೆ ನಿವಾಸಿಗಳು ವಾಗ್ವಾದಕ್ಕಿಳಿದರು.
ಸಾರ್ ನೀವು ಹೀಗೆ ಅನ್ಯಾಯ ಮಾಡಬಾರದಿತ್ತು. ಬಡವರ ಮನೆ ಒಡೆಸಬಾರದಿತ್ತು. ನಾನು ತಾಳಿ ಒತ್ತೆ ಇಟ್ಟು ಮನೆ ಕಟ್ಟಿಸಿಕೊಂಡಿದ್ದೇನೆ. ಇನ್ನೂ ಸ್ವಲ್ಪ ಸಮಯ ಅವಕಾಶ ಮಾಡಿಕೊಟ್ಟರೆ ನಾವೇ ಹೊರಗೆ ಹೋಗುತ್ತಿದ್ದೆವು ಎಂದು ಮಹಿಯೊಬ್ಬರು ಗೋಳಿಟ್ಟರು.
ಕಾರ್ಯಾಚರಣೆ ವೇಳೆ ಮನೆಯೊಂದರಲ್ಲಿ ಇದ್ದ ಹಸುಗೂಸಿನೊಂದಿಗಿದ್ದ ಒಂದೂವರೆ ತಿಂಗಳ ಬಾಣಂತಿ ಪ್ರಿಯಾಂಕಾ ಅವರನ್ನು ಸ್ಥಳಿಯರು ಬೇರೆಡೆ ಕಳುಹಿಸಿಕೊಟ್ಟರು. ಹೂವು ಮಾರಾಟ ಮಾಡಿ ಜೀವನ ನಡೆಸುತ್ತೇವೆ. ಬೆಳಗ್ಗೆ ಮನೆಗೆ ಬಂದ ಅಧಿಕಾರಿಗಳು ನಿದ್ದೆಯಲ್ಲಿದ್ದ ನಮ್ಮನ್ನು ಎಬ್ಬಿಸಿ ಹೊರಗೆ ಹೋಗಲು ತಿಳಿಸಿದರು. ನನ್ನ ಪಾಪುಗೆ ಎಂಥಹ ಸ್ಥಿತಿ ಬಂತು ಸಾರ್ ಎಂದು ಪ್ರಿಯಾಂಕಾ ಕಣ್ಣೀರಾದರು.
ಶಿರಮಗೊಂಡನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಈ ಬಡಾವಣೆ ಕೆಲವು ವರ್ಷಗಳ ಹಿಂದಷ್ಟೇ ಪಾಲಿಕೆಗೆ ಹಸ್ತಾಂತರವಾಗಿತ್ತು. 2017-18ರ ಅವಧಿಯಲ್ಲೂ ಇಲ್ಲಿನ ವಾಸ ಮಾಡುವವರ ಮನೆಗಳ ತೆರವು ಕಾರ್ಯಾಚರಣೆ ಪ್ರಯತ್ನ ನಡೆದಿತ್ತು. ಜನರು ಇಲ್ಲಿಂದ ತೆರವಾಗಿರಲಿಲ್ಲ. ಪಾರ್ಕ್‌ಗೆ ಸಂಬಂಧಿಸಿದ ಜಾಗದಲ್ಲಿ 36 ಕುಟುಂಬದವರು ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರು.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೆಲವು ಸ್ಥಳೀಯರು ನಿರಾಶ್ರಿತರ ಕೇಂದ್ರಕ್ಕೆ ಹೋಗಲು ನಿರಾಕರಿಸಿದ್ದಾರೆ. ನಮಗೆ ಮೂಲ ಸೌಕರ್ಯಗಳೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟಲ್ಲಿ ಅಲ್ಲಿಗೇ ಹೋಗಿ ವಾಸ ಮಾಡಲು ತಯಾರಿದ್ದೇವೆ ಎಂದು ಕೆಲವರು ಸ್ಪಷ್ಟಪಡಿಸಿದ್ದಾರೆ.
------
ಕೋರ್ಟ್‌ನಿಂದ ಈ ಹಿಂದೆಯೇ ಡಿಕ್ರಿ ಆದೇಶವಾಗಿತ್ತು. ಆದರೆ ಪಾಲನೆಯಾಗಿರಲಿಲ್ಲ. ಇದನ್ನು ಪಾಲಿಸಲು ಕೋರ್ಟ್ ನಿದೇಶನ ನೀಡಿದ್ದರಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ತುರ್ಚಘಟ್ಟದ ನಿರಾಶ್ರಿತರ ಕೇಂದ್ರದಲ್ಲಿ ತಂಗಲು ಅವಕಾಶ ಮಾಡಲಾಗಿದೆ. ಅಲ್ಲದೆ ದೊಡ್ಡ ಬೂದಿಹಾಳ್‌ನಲ್ಲಿ ಜಾಗ ನೀಡಲಾಗಿದ್ದು ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ.
ಎಂ.ಬಿ. ಅಶ್ವತ್ಥ
ತಹಸೀಲ್ದಾರ್
--
ಕೋರ್ಟ್ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಪರ್ಯಾಯ ವ್ಯವಸ್ಥೆ ಮಾಡದೆ ಮನೆ ಖಾಲಿ ಮಾಡಿಸುವುದು ಸರಿಯಲ್ಲ. ಜಿಲ್ಲಾ ಸಚಿವರು ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದ್ದರೂ ಅದನ್ನು ಪಾಲಿಸಲಾಗಿಲ್ಲ. ವಿದ್ಯುತ್, ಕುಡಿವ ನೀರು ಯಾವುದೇ ಮೂಲಸೌಕರ್ಯಗಳಿಲ್ಲದ ಬೂದಿಹಾಳ್‌ನಲ್ಲಿ ಮನೆ ಕಟ್ಟಿಕೊಳ್ಳಿ ಎಂದರೆ ಹೇಗೆ ಸಾಧ್ಯ?
ಪಾಮೇನಹಳ್ಳಿ ನಾಗರಾಜ್
ಪಾಲಿಕೆ ಮಾಜಿ ಸದಸ್ಯ.