ಮೆನು ಹೊರತಾದ ಊಟ ವಿತರಣೆ   ಹಾಸ್ಟೆಲ್ ಬಳಿ ಕ್ರೀಡಾಪಟುಗಳ ಪ್ರತಿಭಟನೆ

1000290293.jpg
Published on

ದಾವಣಗೆರೆ: ನಗರದ ಕ್ರೀಡಾ ವಸತಿ ನಿಲಯದಲ್ಲಿ ಮೆನು ಪಟ್ಟಿಯಂತೆ ಊಟ-ಉಪಾಹಾರ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ನಿಲಯಾರ್ಥಿಗಳು ಶುಕ್ರವಾರ ಹಾಸ್ಟೆಲ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೆನುನಂತೆ ಊಟ ಕೊಡಿ ಎಂಬ ಘೋಷಣೆಯೊಂದಿಗೆ ಬೆಳಗಿನ ಉಪಾಹಾರವಿಲ್ಲದೆ ಪ್ರತಿಭಟನೆ ನಡೆಸಿದ ನಿಲಯಾರ್ಥಿಗಳು, ವಾರ್ಡನ್ ಹಾಗೂ ಗುತ್ತಿಗೆದಾರರ ವಿರುದ್ಧ ಕಿಡಿ ಕಾರಿದರು.
ಭಾನುವಾರ, ಗುರುವಾರಗಳಂದು ಮಟನ್ ಊಟ, ಆಗಾಗ್ಗೆ ಮೊಟ್ಟೆ ಹಾಗೂ ನಿತ್ಯ ಡ್ರೈಫ್ರೂಟ್ಸ್ ನೀಡುವುದು ಮೆನು ಪಟ್ಟಿಯಲ್ಲಿದೆ. ಆದರೆ ಅದ್ಯಾವುದನ್ನೂ ಕಳೆದ ಮೂರು ತಿಂಗಳಿಂದ ನಿಯಮಿತವಾಗಿ ನೀಡದೆ ವಂಚಿಸಲಾಗಿದೆ ಎಂದು ಕ್ರೀಡಾಪಟುಗಳು ದೂರಿದರು.
ಹಾಸ್ಟೆಲ್‌ನಲ್ಲಿ ಸುಮಾರು 160 ನಿಲಯಾರ್ಥಿಗಳಿದ್ದೇವೆ. ರಾಜ್ಯದ ವಿವಿಧೆಡೆಗಳಿಂದ ಬಂದಿರುವ ನಾವು ಕಬಡ್ಡಿ, ಖೋಖೋ ಹಾಗೂ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದೇವೆ. ಆಟವಾಡುವ ಸಾಮರ್ಥ್ಯಕ್ಕೆ ತಕ್ಕ ಪೌಷ್ಟಿಕ ಊಟ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಕೆಲವರಿಗೆ ಪರೀಕ್ಷೆ ನಡೆಯುತ್ತಿವೆ. ಮತ್ತೆ ಕೆಲವರಿಗೆ ಕ್ರೀಡೆಗಳು ಆರಂಭವಾಗುತ್ತಿವೆ. ಮೆನುನಂತೆ ಊಟ ನೀಡುತ್ತಿಲ್ಲ ಎಂಬುದಾಗಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅವರಿಗೆ ದೂರು ನೀಡಿದ್ದಾರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಧರಣಿ ಸ್ಥಳಕ್ಕೂ ಎ.ಡಿ. ಬಾರದಿದ್ದಾಗ ಜಿಪಂ ಕಚೇರಿಗೆ ತೆರಳಿ ಸಿಇಒ ಸುರೇಶ್ ಇಟ್ನಾಳ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಹಾಸ್ಟೆಲ್‌ನಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದ ಕ್ರೀಡಾಳುಗಳಿದ್ದಾರೆ. ಐದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ 250 ರೂ.ನಂತೆ ಹಾಗೂ ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ 300 ರೂ.ನಂತೆ ಹಣವನ್ನು ಸರ್ಕಾರ ಗುತ್ತಿಗೆದಾರರಿಗೆ ನೀಡುತ್ತಿದ್ದರೂ ಸರಿಯಾದ  ಆಹಾರ ನೀಡಲಾಗುತ್ತಿಲ್ಲ ಎಂದು ಕ್ರೀಡಾ ಕೋಚ್‌ಗಳು ವಿವರಿಸಿದರು.
ಕಬಡ್ಡಿ, ಖೋಖೋ ವಿದ್ಯಾರ್ಥಿಗಳಾದ ಅನ್ಯಾಯ ಕುಸ್ತಿಪಟುಗಳಿಗೂ ಆಗುತ್ತಿದೆ. ಆದರೆ ವಾರ್ಡನ್ ಹುದ್ದೆ ಜತೆಗೆ ಕುಸ್ತಿ ಕೋಚ್ ಆಗಿಯೂ  ವಿನೋದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಆಟಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ವಾರ್ಡನ್ ವಿರುದ್ಧ ಕುಸ್ತಿ ಕ್ರೀಡಾಪಟುಗಳು ದೂರು ನೀಡಲು ಹೆದರುತ್ತಿರುವುದಾಗಿಯೂ ಮಕ್ಕಳು ಹೇಳಿದರು. ಅವರನ್ನು ವಾರ್ಡನ್ ಹುದ್ದೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ವಿನಯ್, ಶರತ್, ಮನೋಜ್, ಅರ್ಜುನ್, ಖಾಸಿಂ, ರವಿ. ಚೇತಮ್, ಜಗದೀಶ್, ಮಲ್ಲಿಕ್, ಮೋಹನ್ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net