

ದಾವಣಗೆರೆ: ಆರ್ಯ ಈಡಿಗ ಸಮಾಜದವರು ನಾರಾಯಣ ಗುರು ಪರಂಪರೆಯನ್ನು ಮುಂದುವರಿಸಬೇಕು ಎಂದು ಸೋಲೂರಿನ ನಾರಾಯಣಗುರು ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಸಲಹೆ ನೀಡಿದರು.
ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಇಲ್ಲಿನ ವಿನೋಬನಗರದಲ್ಲಿ ನಿರ್ಮಿಸಲಾದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಶಿಕ್ಷಣ, ನೈರ್ಮಲ್ಯ, ದೇಗುಲ ಸ್ಥಾಪನೆ ವಿಚಾರದಲ್ಲಿ ನಾರಾಯಣ ಗುರು ಸಿದ್ಧಾಂತಕ್ಕೆ ವಿರುದ್ಧವಾದ ಜೀವನ ಕ್ರಮವನ್ನು ಸಮಾಜದವರು ಮೈಗೂಡಿಸಿಕೊಂಡಿದ್ದಾರೆ. ಇನ್ನಾದರೂ ಈ ಲೋಪ ತಿದ್ದಿಕೊಂಡು ನಡೆಯಬೇಕು ಎಂದರು.
ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ನಾರಾಯಣ ಗುರು ಹಿಂದೆಯೇ ಆದ್ಯತೆ ನೀಡಿದ್ದರು. ಕೇರಳದಲ್ಲಿ ಇದಕ್ಕೆ ಒತ್ತು ನೀಡಿದ್ದರಿಂದ ಅಲ್ಲಿ ಶೈಕ್ಷಣಿಕವಾಗಿ ಸಮುದಾಯ ಮುಂದುವರಿದಿದೆ. ಕರ್ನಾಟಕದಲ್ಲೂ ಸಮುದಾಯವನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರುವ ಕೆಲಸವಾಗಬೇಕು. ಮಕ್ಕಳು ಅಂಕ ಗಳಿಸುವ ಯಂತ್ರಗಳೂ ಆಗಬಾರದು ಎಂದೂ ಅಭಿಪ್ರಾಯಪಟ್ಟರು.
ನಮ್ಮ ಸಂಸ್ಕೃತಿಯ ಭಾಗವಾಗಿ ಪೂಜೆ, ಧಾರ್ಮಿಕ ಆಚರಣೆಗಳನ್ನು ಎಲ್ಲರೂ ಚಾಚೂತಪ್ಪದೇ ಪರಿಪಾಲಿಸಬೇಕು. ಧಾರ್ಮಿಕ ಕೈಂಕರ್ಯಕ್ಕೆ ಬದುಕು ಸೀಮಿತ ಆಗಬಾರದು. ಶಿಕ್ಷಣದ ಮೂಲಕ ಸಂಸ್ಕೃತಿಯ ಪಥವನ್ನು ಹಿಡಿಯಬೇಕು ಎಂದು ಹೇಳಿದರು.
ಜೆ.ಪಿ. ಫೌಂಡೇಷನ್ ಅಧ್ಯಕ್ಷ ಜೆ.ಪಿ.ಸುಧಾಕರ ಮಾತನಾಡಿ, ಮದ್ಯ ಮಾರಾಟವೇ ಸಮುದಾಯದ ಒಂದು ಕಾಲದ ಕುಲಕಸುಬಾಗಿತ್ತು. ಆಗ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಸಾರಾಯಿ ನಿಷೇಧವಾದ ಬಳಿಕ ಜನಾಂಗಕ್ಕೆ ಶಿಕ್ಷಣ ಅನಿವಾರ್ಯವಾಗಿದೆ. ನಾರಾಯಣ ಗುರು ಅವರ ಆಶಯದಂತೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಸಮಾಜದ ಹಾಸ್ಟೆಲ್ನಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿದ್ದರೂ ನೆರವು ನೀಡಲು ಆಸಕ್ತಿ ತೋರುತ್ತಿಲ್ಲ. ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಸತಿ-ಊಟದ ಅಗತ್ಯವಿದೆ. ಹೀಗಾಗಿ ಎಲ್ಲರೂ ದಾನ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ ರಾಜ್ಯದಲ್ಲಿ 79 ವರ್ಷಗಳ ಹಿಂದೆ ಆರ್ಯ ಈಡಿಗರ ಸಂಘ ಸ್ಥಾಪನೆಯಾಯಿತು. ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಹಾಸ್ಟೆಲ್ ಶುರು ಮಾಡಲಾಯಿತು ಎಂದರು.
ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್. ಶಂಕರ್ ಮಾತನಾಡಿ,1963ರಲ್ಲಿ ವಿದ್ಯಾರ್ಥಿಗಳಿಗೆ ಶುರು ಮಾಡಿದ್ದ ಊಟದ ಮನೆ ಕಾಲಾನಂತರದಲ್ಲಿ ಹಾಸ್ಟೆಲ್ ಸ್ವರೂಪ ಪಡೆಯಿತು. ಆರ್.ಎಲ್.ಜಾಲಪ್ಪ ಮತ್ತು ಜೆ.ಪಿ.ಫೌಂಡೇಷನ್ ಸಹಕಾರದಲ್ಲಿ ಸಂಘದ ವತಿಯಿಂದ 25 ವರ್ಷಗಳಿಂದ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ ಎಂದು ಹೇಳಿದರು.
ತೀರ್ಥಹಳ್ಳಿ ತಾಲೂಕಿನ ಗರ್ತಿಕೆರೆಯ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಎ.ನಾಗರಾಜ್, ಉಪಾಧ್ಯಕ್ಷ ಶಾಂತಾರಾಮ್, ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಚ್. ಜೀವನ್, ಗರ್ತಿಕೆರೆ ಗುರುಪೀಠದ ಅಂಬರೀಷ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ತಿಮ್ಮಪ್ಪ, ರೇಣುಕಾಂಬಾ ಸಹಕಾರ ಸಂಘದ ಸುಮಾ ಭರಮಪ್ಪ ಇದ್ದರು.