ಜಾಗತಿಕ ಕಾರ್ಖಾನೆಯಾದ ಭಾರತ ಸಚಿವ ಪ್ರಲ್ಹಾದ್ ಜೋಶಿ ವಿಶ್ಲೇಷಣೆ

1000495959.jpg
Published on

ದಾವಣಗೆರೆ: ಉತ್ಪಾದನಾ ಕೇಂದ್ರದ ಜಾಗತಿಕ ಕಾರ್ಖಾನೆಯಾಗಿ ಭಾರತ ಪರಿವರ್ತನೆ ಆಗುತ್ತಿದೆ. ಜಗತ್ತಿನ ಇತರೆ ದೇಶಗಳು ನಮ್ಮಲ್ಲಿನ ಉತ್ತಮ ಶಿಕ್ಷಕರು, ವೈದ್ಯರು, ಶುಶ್ರೂಷಕರು, ಸಾಫ್ಟ್‌ವೇರ್, ಹಾರ್ಡ್‌ವೇರ್ ಇಂಜಿನಿಯರ್‌ಗಳ ನಿರೀಕ್ಷೆಯಲ್ಲಿವೆ ಎಂದು ಕೇಂದ್ರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಲ್ಲಿನ ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ, ಜಿಎಂ ವಿಶ್ವವಿದ್ಯಾಲಯದ ನೂತನ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ, ಜಗತ್ತಿನ ಐದನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮೂರನೆಯ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲು ಇಡುತ್ತಿದೆ. ಇದಕ್ಕಾಗಿ ಉತ್ಪಾದನೆ ಮತ್ತು ಆರ್ಥಿಕ ಚಟುವಟಿಕೆಗಳೂ ಪ್ರಚಂಡವಾಗಿ ನಡೆಯುತ್ತಿವೆ. ಜಗತ್ತಿನಲ್ಲೇ ಯುವ ರಾಷ್ಟ್ರವಾದ ಭಾರತ ಇದರ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾನವ ಸಂಪನ್ಮೂಲ ಬೆಳೆದಷ್ಟೂ ಜಾಗತಿಕ ಮಟ್ಟದಲ್ಲಿ ನಮಗೆ ಅವಕಾಶವಿದೆ. 2014ರ ಪೂರ್ವದಲ್ಲಿ ಭಾರತಕ್ಕೆ ಭವಿಷ್ಯವಿದೆ ಎಂದು ಅನ್ನಿಸಿರಲಿಲ್ಲ. ಕೋವಿಡ್ ಪೂರ್ವದಲ್ಲಿ ಜಗತ್ತಿನ ಉತ್ಪಾದನಾ ಕೇಂದ್ರವಾಗಿ ಚೈನಾ ಗುರುತಿಸಿಕೊಂಡಿತ್ತು. ಈಗ ಆ ಸ್ಥಾನದಲ್ಲಿರುವ ಭಾರತದಲ್ಲಿ ಅತಿ ಹೆಚ್ಚಿನ ನೇರ ವಿದೇಶಿ ಬಂಡವಾಳ ಆಕರ್ಷಣೆಯ ನಾಲ್ಕು ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
2016ರಲ್ಲಿ ಭಾರತದಲ್ಲಿ 450 ಸ್ಟಾರ್ಟ್‌ಅಪ್‌ಗಳಿದ್ದವು. ಇಂದು ಅವು 1.28 ಲಕ್ಷಕ್ಕೇರಿವೆ. ಶೇ. 45ರಷ್ಟು 2ನೇ ದೊಡ್ಡ ಮಹಾನಗರಗಳಲ್ಲಿ ಇದರ ಚಟುವಟಿಕೆ ಶುರುವಾಗಿದ್ದು ಇದುವರೆಗೆ 1.30 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತದಲ್ಲಿನ ವಿಶ್ವಾಸಾರ್ಹತೆ, ಸಾಮರ್ಥ್ಯ ಹಾಗೂ ಸ್ಥಿರ ಸರ್ಕಾರ ಮತ್ತು ನಾಯಕರನ್ನು ಗಮನಿಸಿಯೇ ಜಗತ್ತಿನ ಇತರೆ ರಾಷ್ಟ್ರಗಳು ಇಲ್ಲಿ ಬಂಡವಾಳ ಹೂಡಲು ಬರುತ್ತಿವೆ. ಭಾರತ ಜಗತ್ತಿನ ದೊಡ್ಡಣ್ಣ ಆಗಲು ಬಯಸುವುದಿಲ್ಲ. ಬದಲಾಗಿ ಹಿರಿಯಣ್ಣನಾಗಿ 21ನೇ ಶತಮಾನದ ಮುಂಚೂಣಿಯಾಗಿರಲು ಬಯಸುತ್ತಿದೆ ಎಂದು ಹೇಳಿದರು.
2024ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಗುರುತರ ಬದಲಾವಣೆಯ ನೀತಿ ತಂದರು. ಭಾರತಕ್ಕೆ ಜಗದ ಮನ್ನಣೆ ಸಿಗುತ್ತಿದೆ. ಭಾರತದ ಉತ್ಪಾದನಾ ಕೇಂದ್ರಕ್ಕೆ ಬೇಕಾದ ಉತ್ಪನ್ನಗಳನ್ನು ನೀಡಲು ಕೌಶಲಯುತ ಜನರು ಬೇಕು. ಭಾರತದಲ್ಲಿನ ಕೌಶಲ ಮತ್ತು ವೇಗವನ್ನು ಜಗತ್ತು ಗುರುತಿಸುತ್ತಿದೆ ಎಂದರು.
60 ವರ್ಷದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. 33 ಸಾವಿರ ಕಿ.ಮೀ.ವರೆಗೆ ರೈಲ್ವೆ ವಿದ್ಯುದೀಕರಣ ನಡೆದಿತ್ತು. ಆದರೆ ಕಳೆದ 10 ವರ್ಷದಲ್ಲಿ 75 ವಿಮಾನ ನಿಲ್ದಾಣ ನಿರ್ಮಾಣವಾಗಿವೆ. 40 ಸಾವಿರ ಕಿ,ಮೀವರೆಗೆ ರೈಲ್ವೆ ವಿದ್ಯುದೀಕರಣ ನಡೆದಿದೆ. ಇಲ್ಲಿನ ಮೂಲಸೌಕರ್ಯ ಮತ್ತು ಉತ್ತಮ ಮಾನವ ಸಂಪನ್ಮೂಲ ಹೆಚ್ಚಿದರೆ ಮತ್ತಷ್ಟು ಬದಲಾವಣೆ ಬರಲಿದೆ.
ಈಗಾಗಲೆ 11 ಲಕ್ಷ ಕೋಟಿ ರೂ.ಗಳನ್ನು ಮೂಲ ಸೌಕರ್ಯಕ್ಕೆ ನಾವು ವ್ಯಯಿಸಿದ್ದೇವೆ. ಮುಂದಿನ ಐದು ವರ್ಷದಲ್ಲಿ 100 ಲಕ್ಷ ಕೋಟಿ ವೆಚ್ಚ ಮಾಡಲಿದ್ದೇವೆ.ಸ್ಕಿಲ್ ಇಂಡಿಯಾದಡಿ ಕೌಶಲ ವೃದ್ಧಿಗಾಗಿ ಇಂಟರ್ನ್‌ಶಿಫ್, ಅಪ್ರೆಂಟಿಶಿಪ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೇವೆ.
ಯಡಿಯೂರಪ್ಪ ಮೊದಲಾದವರು ತಂದ ಹೊಸ ಶಿಕ್ಷಣ ನೀತಿಯಲ್ಲಿ ಕೇಸರೀಕರಣವಿಲ್ಲದಿದ್ದರೂ ಈಗಿನ ರಾಜ್ಯ ಸರ್ಕಾರ ಅದನ್ನು ತಡೆಹಿಡಿಯಿತು. ಪಿಎಂ ವಿದ್ಯಾಲಕ್ಷ್ಮಿ ಯೋಜನೆಯಡಿ 10 ಲಕ್ಷ ರೂ.ವರೆಗೆ ಗ್ಯಾರಂಟಿರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಐಐಟಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ ಹಳ್ಳಿಗರಿರಲಿ, ನಗರವಾಸಿಗಳೇ ಇರಲಿ ಎಲ್ಲರಿಗೂ ಇಂದು ಅಕ್ಷರಜ್ಞಾನ ಅಗತ್ಯವಿದೆ. ಶಿಕ್ಷಣದಲ್ಲಿ ಯಾವುದೇ ತಾರತಮ್ಯವಿಲ್ಲ. ಯಾವುದೇ ಸರ್ಕಾರಗಳೂ ಸಹ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸೃಷ್ಟಿಸಬೇಕು ಎಂದು ಆಶಿಸಿದರು.
ಎಂಎಲ್ಸಿ ಎನ್. ರವಿಕುಮಾರ್ ಮಾತನಾಡಿ ರತನ್ ಟಾಟಾ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಳ್ಳದೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದರು. ನೀರಾವರಿ ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಹೆಚ್ಚಿವೆ. ಕೋಲಾರದಲ್ಲಿ ಟೊಮ್ಯಾಟೋ, ಮಾವಿನ ಬೆಳೆಗಾರರು ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ಧಾರೆ. ಇದೇ ರೀತಿ ರೈತರಲ್ಲಿ ಹೊಸ ಆಲೋಚನೆ, ಹೊಸ ಪ್ರಯತ್ನಗಳು ಬೇಕು ಎಂದು ಆಶಿಸಿದರು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ 143 ವಿದ್ಯಾರ್ಥಿಗಳಿಂದ ಆರಂಭವಾದ ಜಿಎಂಐಟಿ ಸಂಸ್ಥೆಯಲ್ಲಿ ಇಂದು 8 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಇಲ್ಲಿ ಓದಿದವರಿಗೆ ಉದ್ಯೋಗದ ಭರವಸೆ ಸಿಕ್ಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಕೆ.ಎಸ್.ನವೀನ್, ಶಾಸಕ ಬಿ.ಪಿ.ಹರೀಶ್, ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಎಚ್.ಎಸ್. ಶಿವಕುಮಾರ್, ವೀರೇಶ್ ಹನಗವಾಡಿ, ಟ್ರಸ್ಟಿಗಳಾದ ಜಿ.ಎಂ.ಪ್ರಸನ್ನಕುಮಾರ್, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್‌ಕುಮಾರ್, ಕುಲಪತಿ ಡಾ. ಎಸ್. ಆರ್. ಶಂಕಪಾಲ್ ಇತರರಿದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net