

ದಾವಣಗೆರೆ: ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಆಸ್ಪತ್ರೆಗಳಲ್ಲಿಯೇ ಆರಂಭಿಕ ಸಮಸ್ಯೆ ಪರಿಹರಿಸಬೇಕು. ಹೀಗಾಗಿ ನಾಲ್ಕು ಗ್ರಾಪಂಗಳಲ್ಲಿ ಪ್ರಾಯೋಗಿಕ ಕಾರ್ಯಕ್ರಮವನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಕಡ್ಲೇಬಾಳ್ ಗ್ರಾಮದಲ್ಲಿ ಹೊಂಬೆಳಕು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಪಂ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು ತವರು ಮನೆಯಂತೆ ಮಹಿಳೆಯರ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ.ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿದರೆ ಸಾಲದು. ಅವರ ಆರೋಗ್ಯ ಸ್ಥಿತಿಯನ್ನೂ ದಾಖಲಿಸಬೇಕು.
ಹೆಚ್ಚಿನ ಅಪಾಯ ಸ್ಥಿತಿಯಲ್ಲಿರುವವರನ್ನು ಪ್ರಸವ ಪೂರ್ವದ ವಾರವಧಿಗೆ ಆಸ್ಪತ್ರೆಗೆ ಕರೆತಂದು, ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಈ ಕಾರ್ಯಕ್ರಮವನ್ನು ಭವಿಷ್ಯದಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ದೆಹಲಿಯಲ್ಲಿ ಸ್ವನಿಧಿ ಎಂಬ ಸರ್ಕಾರೇತರ ಸಂಸ್ಥೆ ಮೂಲಕ ಬೇರೆ ರಾಜ್ಯಗಳಲ್ಲಿ ಮೀನು ಸಾಕಣೆ, ಸೌರ ಶಕ್ತಿ ಬಳಸಿ ಆರ್ಥಿಕ ಸಬಲೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲೂ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ, ಅಗತ್ಯ ಕೌಶಲಗಳನ್ನು ಕಲಿಸಿ, ಸರ್ಕಾರದಿಂದ ಸಾಲ ಸೌಲಭ್ಯ ನೀಡಲು ಸಮಗ್ರ ಲಿಂಕ್ ಕಲ್ಪಿಸೋಣ ಎಂದು ತಿಳಿಸಿದರು.
ಸ್ವಸಹಾಯ ಸಂಘಗಳ ಸದಸ್ಯರು ಇತರೆ ತಾಲೂಕಿನವರು ತಯಾರಿಸಿದ ಅನೇಕ ಉತ್ಪನ್ನಗಳನ್ನು ಗಮನಿಸಿ ತಾವೂ ಉತ್ಪಾದಿಸಿ ಆರ್ಥಿಕ ಸಬಲೀಕರಣಕ್ಕೆ ಹಾದಿ ಮಾಡಿಕೊಳ್ಳಬೇಕು. ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಸರ್ಕಾರಿ ಹಾಸ್ಟೆಲ್,ಅಂಗನವಾಡಿಗಳಿಗೆ ಲಿಂಕ್ ಕಲ್ಪಿಸಿದಲ್ಲಿ ನಿಯಮಿತ ಬೇಡಿಕೆ ಹೆಚ್ಚಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಎಸ್‌ಎಸ್ ಕೇರ್ ಟ್ರಸ್ಟ್‌ನಡಿ 35 ವರ್ಷ ಮೇಲ್ಪಟ್ಟ ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯವಿದ್ದವರು ಚಿಕಿತ್ಸೆ ಪಡೆಯಬೇಕು. 9ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ, ಗರ್ಭಕೋಶ ಕ್ಯಾನ್ಸರ್ ತಡೆಯಬಲ್ಲ ಎಚ್‌ಪಿವಿ ಲಸಿಕೆಗಳನ್ನು ಕೊಡಿಸಲು ಗಮನ ಹರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ ಗೃಹಲಕ್ಷ್ಮಿ ಯೋಜನೆಯಡಿ 3.70 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ 1.20 ಲಕ್ಷ ಮಹಿಳೆಯರು ಗುರುತಿಸಿಕೊಂಡಿದ್ದಾರೆ. ಇತರೆ 2.5 ಲಕ್ಷ ಮಹಿಳೆಯರನ್ನು ಸೇರ್ಪಡೆ ಮಾಡಬೇಕಿದೆ ಎಂದರು.
ಸಂಸದರ ಆಶಯದಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನಡಿ ಕ್ರಾಂತಿ ಆಗಬೇಕಿದ್ದು, ಬರುವ ದಿನಗಳಲ್ಲಿ ಇದರಡಿ ಚಟುವಟಿಕೆ ಹೆಚ್ಚಬೇಕಿದೆ. ಎಫ್‌ನ್‌ಎಚ್‌ಡಬ್ಲುೃನಿಂದ ಹಣ ತೆಗೆದಿರಿಸಿದ್ದರೂ ಕಡ್ಲೇಬಾಳ್ ಭಾಗದಲ್ಲಿ ಮಹಿಳೆಯರಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ತಾಯಂದಿರು ಹಾಗೂ ಶಿಶು ಮರಣ ತಗ್ಗಿಲ್ಲ. ಆಶಾ, ಅಂಗನವಾಡಿ, ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿ ಒಳಗೊಂಡಂತೆ ಎಲ್ಲರ ಹಂತದಲ್ಲಿ ಗ್ರಾಮ ಸಭೆ, ವಾರ್ಡ್ ಸಭೆಯಲ್ಲಿ ಈ ಬಗ್ಗೆ ನಿಯಮಿತ ಚರ್ಚಯಾಗಬೇಕು ಎಂದು ಆಶಿಸಿದರು.
ಬಡತನ ನಿರ್ಮೂಲನೆ (ವಿಪಿಆರ್‌ಪಿ) ಯೋಜನೆಯಡಿ ಪ್ರತಿ ಮನೆಗೆ ಹೋಗಿ ಅಗತ್ಯತೆಗಳ ಬಗ್ಗೆ ಮಂಡನೆ ಮಾಡಬೇಕು. ಇಲ್ಲವಾದಲ್ಲಿ ನರೇಗಾ, 15ನೇ ಹಣಕಾಸು, ಸ್ವಚ್ಛ ಭಾರತ್ ಯೋಜನೆಗಳು ಸಾಕಾರವಾಗವು. ಕೇರಳದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆ ಸಕ್ರಿಯವಾಗಿರುವ ಕಾರಣಕ್ಕೆ ಬಾಲ್ಯವಿವಾಹ, ಪೋಕ್ಸೋ, ಕೌಟುಂಬಿಕ ದೌರ್ಜನ್ಯಗಳು ಗಣನೀಯವಾಗಿ ಕಡಿಮೆಯಾಗಿವೆ. ನಾವೂ ಸಹ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಎಚ್. ರಾಮಚಂದ್ರಪ್ಪ ಅವರು ಹೊಂಬೆಳಕು ಸಂಜೀವಿನಿ ಒಕ್ಕೂಟದ ವಾರ್ಷಿಕ ವರದಿಯನ್ನು, ಕೃಷಿ ಅಧಿಕಾರಿ ಡಿ.ಎಂ.ಶ್ರೀಧರಮೂರ್ತಿ, ತೋಟಗಾರಿಕೆ ಅಧಿಕಾರಿ ರೇಷ್ಮಾ ಪರ್ವೀನ್, ಸಿಡಿಒಪಿ ಜಿ.ಎಸ್. ಅಭಿಕುಮಾರ್, ತಾಪಂ ಇಒ ರಾಮಭೋವಿ ವಿವಿಧ ವರದಿ ಮಂಡಿಸಿದರು. ಗ್ರಾಪಂ ಅಧ್ಯಕ್ಷೆ ಭರಮಕ್ಕ ಪರಸಪ್ಪ, ಉಪಾಧ್ಯಕ್ಷ ಎ.ಬಿ.ಪ್ರಭಾಕರ್, ಸದಸ್ಯ ಬಿ.ಕೆ. ಪರಶುರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಎಂ,ಬಿ. ಅಶ್ವಥ್, ತಾಪಂ ಮಾಜಿ ಸದಸ್ಯ ಮೇಕಾ ಮುರುಳೀಕೃಷ್ಣ, ಟಿ. ಅಂಜಿಬಾಬು, ಮುಖಂಡರಾದ ಕರೇಗೌಡ್ರು ಹನುಮಂತಪ್ಪ, ಮಂಜುಳಾಬಾಯಿ, ಅಕ್ಕಮ್ಮ ಇತರರಿದ್ದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ನಡೆಸಲಾಯಿತು.
----