

ದಾವಣಗೆರೆ: ಚನ್ನಗಿರಿ ಘಟನೆ ಸಂಬಂಧ ಇದುವರೆಗೆ 36 ಜನರನ್ನು ಬಂಧಿಸಲಾಗಿದೆ. ಮಟಕಾ ಆರೋಪಿ ಸಾವು ಹಾಗೂ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ, ದಾಂಧಲೆ ಪ್ರಕರಣ ಎರಡನ್ನೂ ಸಿಐಡಿ ತನಿಖೆಗೆ ಆದೇಶ ಮಾಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಸತ್ಯಾಂಶ ಹೊರಬರಬೇಕಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಚನ್ನಗಿರಿ ಠಾಣೆಗೆ ಗುರುವಾರ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತಪ್ಪು ಮಾಡಿದವರನ್ನು ಬಿಡುವುದಿಲ್ಲ. ಸಿಸಿ ಟಿವಿ ದೃಶ್ಯಾವಳಿ ಗಮನಿಸಿ, ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ಆರೋಪಿತರನ್ನು ಬಂಧಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಘಟನೆ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಅಧಿಕಾರಿಗಳ ಅಮಾನತು ಪ್ರಕ್ರಿಯೆ ಸಹಜ. ತನಿಖೆ ಬಳಿಕ ಅಧಿಕಾರಿಗಳು ತಪ್ಪೆಸಗಿಲ್ಲ ಎಂಬುದು ಸಾಬೀತಾದಲ್ಲಿ ಮರು ನಿಯೋಜನೆ ಆಗಲಿದ್ದಾರೆ. ಆರೋಪಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದನೆ ಎಂಬುದು ತಿಳಿದಿಲ್ಲ. ಮರಣೋತ್ತರ ವರದಿ ಇದುವರೆಗೆ ತಲುಪಿಲ್ಲ ಎಂದೂ ಸಚಿವರು ಉತ್ತರಿಸಿದರು.
* ಪಾಕಿಸ್ತಾನ ಜಿಂದಾಬಾದ್ ಕೂಗಿಲ್ಲ
ಚನ್ನಗಿರಿ ಠಾಣೆ ಬಳಿ ಮೇ 24ರಂದು ನಡೆದ ಘಟನೆಯಲ್ಲಿ ಯಾರೂ ಕೂಡ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ಹಾಗೆ ಕೂಗಿದ್ದಾರೆ ಎಂದು ಆರೋಪಿಸುವವರು ಸಾಕ್ಷಿ ಕೊಡಲಿ. ಅಪಪ್ರಚಾರ ಮಾಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಡ್ಯ, ಬಾಗಲಕೋಟೆ ಇತರೆಡೆ ಭ್ರೂಣಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಈ ಪ್ರಕರಣಗಳಲ್ಲಿ ಭಾಗಿಯಾದ ವೈದ್ಯರು, ನಕಲಿ ವೈದ್ಯರ ಬಗ್ಗೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸರ್ಕಾರ ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದ ಬಳಿಕ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಸಿದ್ದು, ತರಬೇತಿ ಮುಗಿದ ನಂತರ ಠಾಣೆಗಳಿಗೆ ನಿಯೋಜನೆ ಮಾಡಲಾಗುವುದು ಎಂದ ಪರಮೇಶ್ವರ್, ನಲ್ಲೂರು ಠಾಣೆ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಎಸ್ಪಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಸಭೆ ನಡೆಸಿದ ಗೃಹ ಸಚಿವರು, ಪೂರ್ವ ವಲಯ ಐಜಿಪಿ ಡಾ.ಕೆ. ತ್ಯಾಗರಾಜನ್, ಎಸ್ಪಿ ಉಮಾ ಪ್ರಶಾಂತ್ ಅವರಿಂದ ಚನ್ನಗಿರಿ ಘಟನೆ ಕುರಿತಂತೆ ಮಾಹಿತಿ ಪಡೆದರು.