ಕಡಿಮೆ ತೂಕದ ಮಕ್ಕಳ ಬಗ್ಗೆ ಇರಲಿ ನಿಗಾ

1001234186.jpg
Published on

ದಾವಣಗೆರೆ: ಕಡಿಮೆ ತೂಕವುಳ್ಳ, ಅವಧಿಪೂರ್ವ ಜನಿಸಿದ ಮಕ್ಕಳು, ಹೃದಯ, ಶ್ವಾಸಕೋಶದ ಸಮಸ್ಯಾತ್ಮಕ ಮಕ್ಕಳು, ವೈರಲ್ ಸೋಂಕಿಗೆ ಸುಲಭದ ತುತ್ತಾಗುವ ಸಾಧ್ಯತೆ ಇದೆ. ಈ ಮಕ್ಕಳ ಬಗ್ಗೆ ಪಾಲಕರು ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಬಿ.ಎಂ.ಶಶಿಧರ್ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವೇಕ್ ಪಾಲಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಮಕ್ಕಳನ್ನು ಕಾಡುತ್ತಿರುವ ಕೆಮ್ಮಿಗೆ ಪರಿಹಾರ’ ವಿಚಾರವಾಗಿ ಉಪನ್ಯಾಸ ನೀಡಿದರು.

ಐದು ವರ್ಷದೊಳಗಿನವರು, ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆ. ಸ್ತನ್ಯಪಾನದ ಕೊರತೆ, ಅಪೂರ್ಣ ರೋಗ ನಿರೋಧಕ ಶಕ್ತಿ, ಅತಿ ಜನದಟ್ಟಣೆ, ಕೂಡು ಕುಟುಂಬದ ಗಾತ್ರ ಮಕ್ಕಳಲ್ಲಿ ತೀವ್ರ ಉಸಿರಾಟದ ಸೋಂಕಿನ ಅಪಾಯಕಾರಿ ಅಂಶಗಳಾಗಿವೆ ಎಂದರು.

ಆರು ತಿಂಗಳಿಂದ 3 ವರ್ಷದೊಳಗಿನ ಮಕ್ಕಳಲ್ಲಿ ಕ್ರೂಪ್ ಎಂಬ ಶ್ವಾಸನಾಳದ ಉರಿಯೂತ ಕಮಡುಬರಲಿದೆ. ಒರಟಾದ ಧ್ವನಿ, ಉದಿರಾಟದ ಸಮಯದಲ್ಲಿ ಕೇಳಿಸುವ ಶಬ್ಧದ ಜತೆಗೆ ಜ್ವರ, ಮೂಗಿನಿಂದ ನೀರು ಸುರಿಯುವುದು, ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

2 ವಾರದ ಅವಧಿಯೊಳಗೆ ನಾಯಿಕೆಮ್ಮು ಕಾಣಬಹುದು. ಒಂದರಿಂದ ಆರು ವಾರಗಳ ಅವಧಿಯಲ್ಲಿ ಪ್ಯಾರೊಕ್ಸಿಸ್ಸಲ್ ಹಂತ ಕಂಡುಬರಲಿದ್ದು ನಿರಂತರ ಕೆಮ್ಮಿನಿಂದ ಪೂಪ್ ಎಂಬ ಶಬ್ಧ ಬರಲಿದೆ. ಕೆಮ್ಮಿನ ನಂತರ ವಾಂತಿ, ಉಸಿರಾಟ ಸಮಸ್ಯೆ, ಮುಖ ಕೆಂಪು ಅಥವಾ ನೀಲಿ ಬಣ್ಣಕ್ಕೆ ತಿರುಗಬಹುದು.

ಇತ್ತೀಚೆಗೆ ಕೆಲವೆಡೆ ಕಫ ಸಿರಪ್ ಸೇವನೆಯ ನಂತರ ಶಿಶುಗಳಲ್ಲಿ ತೀವ್ರ ಅಸ್ವಸ್ಥತೆ ಮತ್ತು ಮೃತಪಟ್ಟಿರುವ ಘಟನೆಗಳು ದಾಖಲಾಗಿವೆ. ವೈದ್ಯಕೀಯ ತನಿಖೆಯಲ್ಲಿ ಈ ಸಿರಪ್‌ಗಳಲ್ಲಿ ವಿಷಕಾರಿ ಡೈಲಿಥೀನ್ ಗ್ಲೈಕಾಲ್, ಇತರ ಹಾನಿಕಾರಕ ಮಾಲಿನ್ಯಗಳು ಪತ್ತೆಯಾಗಿವೆ.

ಹೀಗಾಗಿ ಎರಡು ವರ್ಷದೊಳಗಿನ ಮಕ್ಕಳಿಗೆ ಕಫ-ಶೀತದ ಸಿರಪ್‌ಗಳ ಅಗತ್ಯವಿಲ್ಲ. ವೈದ್ಯರ ಸಲಹೆ ಪಡೆಯದೆ ಮಕ್ಕಳಿಗೆ ಕಫ ಅಥವಾ ಶೀತದ ಸಿರಪ್ ಕೊಡಬಾರದು. ಖರೀದಿಸಿದ ಔಷಧದ ಮೇಲಿರುವ ಬ್ಯಾಚ್ ಸಂಖ್ಯೆ, ತಯಾರಿಕಾ ಸಂಸ್ಥೆ ಮತ್ತು ಅವಧಿ ಪರಿಶೀಲಿಸಬೇಕು ಎಂದು ಕಿವಿಮಾತು ಹೇಳಿದರು.

ಮಗುವಿಗೆ ಜ್ವರವಿದ್ದಲ್ಲಿ ನಿಯಮಿತವಾಗಿ ಗಮನಿಸಬೇಕು. ಸಾಕಷ್ಟು ನೀರು, ದ್ರವಾಹಾರ ನೀಡಿ. ಮಗುವಿಗೆ ವಿಶ್ರಾಂತಿ ಕಲ್ಪಿಸಿ, ಹಗುರವಾಗಿ ಬಟ್ಟೆ ತೊಡಿಸಿ. ವೈದ್ಯರ ಸಲಹೆಯಂತೆ, ಪ್ಯಾರಾಸಿಟಮಲ್ ಕೊಡಬೇಕು. ಪೌಷ್ಟಿಕ ಆಹಾರ, 1 ವರ್ಷದ ನಂತರದ ಮಗುವಿನ ಕೆಮ್ಮಿಗೆ ಜೇನುತುಪ್ಪ, ತುಳಸಿ ಬಳಸಿ. ವೈದ್ಯರನ್ನು ಕೇಳದೆ ಮಕ್ಕಳಿಗೆ ಆ್ಯಂಟಿ ಬಯೋಟಿಕ್ ನೀಡಬೇಡಿ ಎಂದು ಹೇಳಿದರು.

ಜ್ವರ ಮೂರು ದಿನದಲ್ಲಿ ತಗ್ಗದಿದ್ದಲ್ಲಿ, ವೇಗದ ಉಸಿರಾಟ, ಮುಖ ನೀಲಿ ಬಣ್ಣಕ್ಕೆ ತಿರುಗಿದಲ್ಲಿ, ಕಡಿಮೆ ಚಟುವಟಿಕೆ ಹೊಂದಿದಲ್ಲಿ ಮಗುವನ್ನು ವೈದ್ಯರಲ್ಲಿಗೆ ಕರೆದೊಯ್ಯಬೇಕು.

ಮಕ್ಕಳಲ್ಲಿ ಸೋಂಕು ತಡೆಯಲು ಊಟದ ಮೊದಲು, ಶೌಚದ ನಂತರ ಕೈ ತೊಳೆಯಬೇಕು. ಶುದ್ಧ ನೀರು ಕುಡಿಸಬೇಕು. ಪೌಷ್ಟಿಕ ಆಹಾರ ನೀಡಬೇಕು. ಸೋಂಕಿತ ಮಗುವನ್ನು ಬೇರೆ ಮಕ್ಕಳಿಂದ ದೂರ ಇರಿಸಬೇಕು. ಮಾಸ್ಕ್ ಬಳಸಬೇಕು. ಲಸಿಕೆ ನೀಡುವ ಜತೆಗೆ ಮನೆ, ಶಾಲೆ, ಆಟದ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞ ಡಾ.ಸಿ.ಆರ್. ಬಾಣಾಪುರಮಠ, ಡಾ. ಸುರೇಶ್‌ಬಾಬು, ಆಸ್ಪತ್ರೆ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಮಧು ಪೂಜಾರ್, ಡಾ. ರೇವಪ್ಪ, ಡಾ. ಮೃತ್ಯುಂಜಯ, ಡಾ. ಕೌಜಲಗಿ ಇತರರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net