ಮಕ್ಕಳ ಸಾಮರ್ಥ್ಯ ಮೀರಿ ನಿರೀಕ್ಷಿಸದಿರಿ

1000694062.jpg
Published on

ದಾವಣಗೆರೆ: ಪರೀಕ್ಷೆ ವಿಚಾರದಲ್ಲಿ ಪಾಲಕರು ಮಕ್ಕಳ ಸಾಮರ್ಥ್ಯಕ್ಕೂ ಮೀರಿದ ನಿರೀಕ್ಷೆ ಒಳ್ಳೆಯದಲ್ಲ. ಇತರರಿಗಿಂತ ಹೆಚ್ಚು ಅಂಕ ಪಡೆಯಬೇಕು, ಟಾಪರ್ ಆಗಬೇಕು, ಮರ್ಯಾದೆ ಉಳಿಸಬೇಕು ಎಂಬ ಒತ್ತಡ ಹೇರಬಾರದು ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಕೆ.ಎ ಛಾಯಾ ಹೇಳಿದರು
ಇಲ್ಲಿನ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ, ವಿವೇಕ್ ಪಾಲಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯ ಮತು ಪಾಲಕರಿಗೆ ಕಿವಿಮಾತು’ ವಿಷಯ ಕುರಿತು ಮಾತನಾಡಿದರು.
ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬ ಗಾದೆಯಂತೆ ಮಕ್ಕಳು ಪರೀಕ್ಷೆ ಹತ್ತಿರವಿದ್ದಾಗ ಓದುವುದಕ್ಕಿಂತಲೂ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಆಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು ಎಂದರು.
ಪರೀಕ್ಷೆ ಬಗ್ಗೆ ಪಾಲಕರಲ್ಲಿ ಆತಂಕ ಬೇಕಿಲ್ಲ. ಇದನ್ನು ನೀಗಲು ಧ್ಯಾನ, ವ್ಯಾಯಾಮ, ಪೂಜೆ, ಹಾಡು ಕೇಳುವುದು ಉತ್ತಮ. ನೆರೆ ಮನೆಯವರ ಮಾತುಗಳಿಗೆ ಕಿವಿಗೊಟ್ಟಲ್ಲಿ ಮಕ್ಕಳ ಆತ್ಮಸ್ಥೈರ್ಯ ಕುಗ್ಗಲಿದೆ. ಇತರ ಮಕ್ಕಳನ್ನು ಹೋಲಿಸದೆೆ ಹಿಂದಾದ ಪರೀಕ್ಷೆಗಳ ಕಹಿ ನೆನಪುಗಳನ್ನು ನೆನಪು ಮಾಡಿಕೊಡಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಪರೀಕ್ಷಾ ಒತ್ತಡವನ್ನು ನಿಭಾಯಿಸುವ ಭಾಗವಾಗಿ ಪರೀಕ್ಷಾ ಭಯ ಹೋಗಲಾಡಿಸಬೇಕು. ಪರೀಕ್ಷೆ ಕೋಣೆಯಲ್ಲಿ ಅನುತ್ತೀರ್ಣರಾದರೂ ಜೀವನ ಹಾಗೂ ದೇಶಾಭಿವೃದ್ಧಿಯಲ್ಲಿ ಅನೇಕರು ಕೈ ಜೋಡಿಸಿದ್ದಾರೆ. ಹೀಗಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮನವರಿಕೆ ಮಾಡಬೇಕು ಎಂದರು.
ಮಕ್ಕಳನ್ನು ಧ್ಯಾನ, ವ್ಯಾಯಾಮ, ದೇವರ ಪೂಜೆ, ನೃತ್ಯ, ಸಂಗೀತ ಮೊದಲಾದ ಚಟುವಟಿಕೆ ಮೂಲಕ ಸಹಜ ಸ್ಥಿತಿಗೆ ತರಬೇಕು. ಇದರಿಂದ ಮಗುವಿಗೆ ಪ್ರೀತಿ ಮತ್ತು ಸಹಜ ಆರೈಕೆ ದೊರೆಯುತ್ತದೆ.ಮುಗುಳ್ನಗೆಯೊಂದಿಗೆ ಪ್ರೋತ್ಸಾಹಿಸಿ. ನಿತ್ಯ 6ರಿಂದ 8 ತಾಸು ನಿದ್ದೆ ಮಾಡಲು, ಪರೀಕ್ಷೆ ದಿನಗಳಲ್ಲಿ ಸಾತ್ವಿಕ ಆಹಾರ ಸೇವಿಸಲು ತಿಳಿ ಹೇಳಬೇಕು.
ವೇಳಾಪಟ್ಟಿಯಂತೆ ವಿಷಯವಾರು ಮತ್ತು ಕಷ್ಟವಿರುವ ವಿಷಯಗಳನ್ನು ಓದುವುದು, ಆರೋಗ್ಯಕರವಾದ ಆಹಾರ ಸೇವನೆ ಕ್ರಮ, ದಿನಕ್ಕೆ 2 ಲೀ. ನೀರು ಸೇವನೆ, ಒಳ್ಳೆಯ ಹವ್ಯಾಸಗಳು, ಕುಟುಂಬದ ಬೆಂಬಲ, ಶಾಲೆಗಳಲ್ಲಿ ಆರೋಗ್ಯಕರ ವಾತಾವರಣ ಇರಬೇಕು.  
ಮಕ್ಕಳು ಅನುತ್ತೀರ್ಣರಾದ ಮಕ್ಕಳು ಮತ್ತು ಅವರ ಪಾಲಕರ ಬಗ್ಗೆ ಕೀಳು ಚರ್ಚೆ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು. ಬದಲಿಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಹಿರಿಯ ಮಕ್ಕಳ ತಜ್ಞ ಡಾ. ಸುರೇಶ್ ಬಾಬು, ಡಾ.ಕೌಜಲಗಿ, ಡಾ. ಮೃತ್ಯುಂಜಯ ಹಾಗೂ ಪ್ರಾಧ್ಯಾಪಕರು, ಶುಶ್ರೂಷಾ ವಿದ್ಯಾರ್ಥಿಗಳು, ಮಕ್ಕಳ ಪಾಲಕರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net