ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ನಾಳೆ ಹಾಸನ ಚಲೋ

1000154672.jpg
Published on

ದಾವಣಗೆರೆ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು ಹಾಗೂ ಹೆಣ್ಣುಮಕ್ಕಳ ಘನತೆ ಕಾಪಾಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮೇ 30ರಂದು ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು ತಿಳಿಸಿದರು.
ಎಲ್ಲ ಜಿಲ್ಲೆಗಳೂ ಸೇರಿದಂತೆ ಸುಮಾರು 10 ಸಾವಿರ ಸಂಖ್ಯೆಯ ಸದಸ್ಯರು ಸೇರುವ ನಿರೀಕ್ಷೆ ಇದೆ. ಮೇ 29ರಂದು ದಾವಣಗೆರೆಯಿಂದಲೂ ಅಲ್ಲಿಗೆ ತೆರಳಲಾಗುವುದು. ಹಾಸನ ಸೇರಿ ಇತರ ಜಿಲ್ಲೆಗಳಲ್ಲಿ ನಡೆದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನದಲ್ಲಿ ಹೇಮಾವತಿ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಹೊಸ ಬಸ್ ನಿಲ್ದಾಣದ ಬಳಿ ಬಹಿರಂಗ ಸಭೆ ನಡೆಸಲಾಗುವುದು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ, ಲೇಖಕಿ ರೂಪಾ ಹಾಸನ, ಕೆ.ಎಸ್. ವಿಮಲಾ, ವಿಜಯಾ ಅವರು ಪಾಲ್ಗೊಳ್ಳುವರು ಎಂದು ಹೇಳಿದರು.
ರಾಜ್ಯದಲ್ಲಿಂದು ಪೆನ್‌ಡ್ರೈವ್ ಸೋರಿಕೆ ಮಾಡಿದವರ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು ಸರ್ಕಾರದಿಂದ ಸಂತ್ರಸ್ತ ಮಹಿಳೆಯರನ್ನು ಸಂತೈಸುವ ಕೆಲಸ ಆಗುತ್ತಿಲ್ಲ. ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲಾಗಿಲ್ಲ. ಕೇಂದ್ರ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರ ತ್ವರಿತವಾಗಿ ಕರೆತರಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಬದುಕು ಛಿದ್ರಗೊಂಡಿರುವ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮಹಿಳಾ ಆಯೋಗ ಹಾಗೂ ಸರ್ಕಾರ ವಿಶ್ವಾಸದ ಹೆಜ್ಜೆ ಇಡಬೇಕು. ಹೆಣ್ಣುಮಕ್ಕಳ ದೌರ್ಜನ್ಯ ತಡೆಗೆ ಸರ್ಕಾರ ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಿ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.
ಎಸ್‌ಯುಸಿಐ ಮುಖಂಡ ಮಧು ತೊಗಲೇರಿ, ಎಐಎಂಎಸ್‌ಎಸ್‌ನ ಮಮತಾ, ಮಹಿಳಾ ಮುನ್ನಡೆ ಸಂಘದ ಪವಿತ್ರಾ, ಕೆಎಸ್‌ಎಸ್‌ನ ಸತೀಶ್ ಅರವಿಂದ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net