506 ನೇಕಾರರ ಕಣ್ಣಲ್ಲಿ ‘ಸಮ್ಮಾನ್’ ಕಾತರ..

dvg nekara samman may 30
ದಾವಣಗೆರೆಯ ಕೈಮಗ್ಗವೊಂದರಲ್ಲಿ ಮಗ್ಗ ನೇಯುತ್ತಿರುವ ಕಾರ್ಮಿಕ.
Published on

ಡಿ.ಎಂ.ಮಹೇಶ್ ದಾವಣಗೆರೆ
ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಕೈಮಗ್ಗ ನೇಕಾರ ಕುಟುಂಬಗಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ವಾರ್ಷಿಕ 2 ಸಾವಿರ ರೂ.ಗಳನ್ನು ನೇರ ನಗದು ವರ್ಗಾವಣೆ ಮಾಡುವ ‘ನೇಕಾರರ ಸಮ್ಮಾನ್’ ಯೋಜನೆ ಜಾರಿಗೊಳಿಸಿದೆ.

2017ರ ಸಮೀಕ್ಷೆ ಅನ್ವಯ ದಾವಣಗೆರೆ ಜಿಲ್ಲೆಯಲ್ಲಿ ಗುರುತಿಸಲಾದ 393 ನೇಕಾರ ಕುಟುಂಬದ 506 ಮಂದಿ ಇದರ ಲಾಭ ಪಡೆಯಲಿದ್ದಾರೆ.

ಈ ಪೈಕಿ ನೂಲು, ಗಂಜಿ ತೆಗೆಯುವುದು, ಕಣಿಕೆ ಸುತ್ತುವುದು ಸೇರಿ ನೇಕಾರಿಕೆ ಚಟುವಟಿಕೆ ನಿರತ 246 ಫಲಾನುಭವಿಗಳ ಜೇಬಿಗೆ ಈ ಹಣ ಬರಲಿದೆ. ಜಿಲ್ಲೆಯಲ್ಲಿ ಒಟ್ಟು 120 ಕೈಮಗ್ಗಗಳು ಕಾರ್ಯ ನಿರತವಾಗಿವೆ.

ಹತ್ತಿ, ಉಣ್ಣೆ, ರೇಷ್ಮೆ ಮತ್ತು ಇತರೆ ಕೈಮಗ್ಗ ಚಟುವಟಿಕೆಯಲ್ಲಿ ತೊಡಗಿದವರು, ನಾಲ್ಕನೇ ರಾಷ್ಟ್ರೀಯ ಕೈಮಗ್ಗ ಗಣತಿ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟವರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಹೊಂದಿದವರು ಇದಕ್ಕೆ ಅರ್ಹರು.

ವಿದ್ಯುತ್ ಮಗ್ಗಕ್ಕೂ ನೆರವು: ವಿದ್ಯುತ್ ಚಾಲಿತ ಮಗ್ಗಗಳಿಗೂ ಸರ್ಕಾರ, ಒಂದು ಬಾರಿಗೆ ಸೀಮಿತವಾಗಿ 2 ಸಾವಿರ ರೂ. ನೆರವು ಘೋಷಿಸಿದೆ. ಒಂದರಿಂದ 20 ಅಶ್ವಶಕ್ತಿವರೆಗೆ ವಿದ್ಯುತ್ ರಿಯಾಯ್ತಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ವಿದ್ಯುತ್ ಮಗ್ಗ ಘಟಕಗಳಿಗೆ ಈ ಪರಿಹಾರ ಸಿಗಲಿದೆ.

ಷರತ್ತಿನನ್ವಯ ಜಿಲ್ಲೆಯ 280 ವಿದ್ಯುತ್ ಮಗ್ಗಗಳ ಪೈಕಿ 154 ಮಗ್ಗಗಳ 18 ಘಟಕಗಳು ಇದರ ಲಾಭ ಪಡೆಯಲಿವೆ. ಸುಮಾರು 90 ಮಂದಿ ಜೇಬಿಗೆ ಹಣ ಸೇರಲಿದೆ ಎನ್ನುತ್ತಾರೆ ಅಧಿಕಾರಿಗಳು.

ಯಾರಿಗೆ ಸಾಲುತ್ತೆ ನೆರವು?: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳಿಗೆ 5 ಸಾವಿರ ರೂ. ಪರಿಹಾರಧನ ಘೋಷಿಸಿರುವ ಸರ್ಕಾರ, ನೇಕಾರರಿಗೆ ಕೇವಲ 2 ಸಾವಿರ ರೂ. ಹಣ ಮೀಸಲಿಟ್ಟಿರುವುದು ನ್ಯಾಯಸಮ್ಮತವಲ್ಲ. ಹೆಚ್ಚಿನ ಮೊತ್ತ ಮೀಸಲಿಟ್ಟಲ್ಲಿ ನೇಕಾರಿಕೆ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗಲಿದೆ. ವಲಸೆ ಹೋಗುವುದು ತಪ್ಪಲಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕೆಂಬುದು ನೇಕಾರರ ಸಂಘಗಳ ಆಗ್ರಹ.

ಲಾಕ್‌ಡೌನ್ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೀಡಾದ ನೇಕಾರರಿಗೆ ರಾಜ್ಯ ಸರ್ಕಾರದ ನೇಕಾರ ಸಮ್ಮಾನ್ ಯೋಜನೆ ಉಪಯುಕ್ತವಾಗಿದೆ. ನಾಲ್ಕನೇ ರಾಷ್ಟ್ರೀಯ ಕೈಮಗ್ಗ ಗಣತಿ ಆಧರಿಸಿ ಫಲಾನುಭವಿಗಳ ಆಯ್ಕೆ ನಡೆಸಲಾಗಿದೆ ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಸಪಾರೆ ಶ್ರೀನಿವಾಸ್ ತಿಳಿಸಿದರು.

ಆಂಧ್ರದ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಪ್ರತಿ ನೇಕಾರರಿಗೆ ತಲಾ 20 ಸಾವಿರ ರೂ. ನೆರವು ಘೋಷಿಸಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಜಾರಿ ಮಾಡಬೇಕು. ಈ ಸಂಬಂಧ ಬರುವ ದಿನಗಳಲ್ಲಿ ನೇಕಾರ ಸಂಘಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೈಮಗ್ಗ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಗುಬ್ಬಿ ಬಸವರಾಜ್ ಹೇಳಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net