

ದಾವಣಗೆರೆ: ಕಾಲಗರ್ಭದಲ್ಲಿ ಹುದುಗಿಹೋಗಿದ್ದ ವಚನ ಸಾಹಿತ್ಯವನ್ನು ಮನುಕುಲಕ್ಕೆ ಪರಿಚಯಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಗರದ ಎಂಸಿಸಿ ‘ಎ’ ಬ್ಲಾಕ್‌ನ ಶ್ರೀ ಗುರು ಬಸವ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳಕಟ್ಟಿಯವರು ಊರೂರು ಸುತ್ತಿ ಮನೆಗಳಲ್ಲಿ ತಾಡೋಲೆಗಳಲ್ಲಿದ್ದ ವಚನಗಳನ್ನು ಅನ್ವೇಷಿಸಿ, ಸಂಶೋಧಿಸಿ ಹಾಗೂ ಸಂರಕ್ಷಣೆ ಮಾಡಿದರು. ವಚನ ಶಾಸ್ತ್ರ ಸಾರ ಎಂಬ ಬೃಹತ್ ಗ್ರಂಥವನ್ನೆ ಪ್ರಕಟಿಸಿದರು. ಸುಮಾರು 175 ವಚನ ಕೃತಿಗಳ ಮೂಲಕ 10 ಸಾವಿರ ವಚನಗಳನ್ನು ಪರಿಚಯಿಸಿದ್ದಾರೆ ಎಂದು ತಿಳಿಸಿದರು.
ವಚನ ಸಂಸ್ಕೃತಿ ಎಂಬುದು ಮನುಕುಲದ ಬದುಕಿನ ಸಂವಿಧಾನ. ವಚನ ಸಾಹಿತ್ಯದ ಮೂಲಕ ಶರಣರು ಸಮ ಸಮಾಜದ ಉದಯಕ್ಕೆ ಅಸ್ತಿತ್ವ ಹಾಕಿದರು. ವಚನಗಳು ಅರಿವು, ಆಚಾರ ಹಾಗೂ ಅನುಭಾವದ ಚಿಂತನೆಗಳ ಮೂಲಕ ಆತ್ಮೋದ್ಧಾರದ ಜತೆಗೆ ಮಾನವ ಕಲ್ಯಾಣದ ಆಶಯ ಹೊಂದಿದ್ದು, ವಚನ ಸಂಸ್ಕೃತಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ವಸ್ತ್ರದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಫ.ಗು. ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದರಲ್ಲದೆ, ಸಂಗೀತಕ್ಕೂ ಅಳವಡಿಸುವ ಕೆಲಸ ಮಾಡಿದರು. ವಚನ ಸಾಹಿತ್ಯದ ಜತೆಗೆ ಹರಿಹರನ 42 ರಗಳೆ ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ, ದತ್ತಿ ದಾನಿ ಮಮತಾ ನಾಗರಾಜ್ ಮಾತನಾಡಿ, ವಚನಗಳಲ್ಲಿ ಜೀವನ ಮೌಲ್ಯ ಅಡಗಿದ್ದು, ಬದುಕಿನ ಉತ್ತರ ಕಂಡುಕೊಳ್ಳಬಹುದು. ಹೀಗಾಗಿ, ಎಲ್ಲರೂ ವಚನಗಳ ಸಂರಕ್ಷಣೆ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರ ಘಟಕ ಅಧ್ಯಕ್ಷ ಎಂ.ಪರಮೇಶ್ವರಪ್ಪ ಸಿರಿಗೆರೆ, ತಾಲೂಕು ಘಟಕ ಅಧ್ಯಕ್ಷ ಎಸ್.ಬಿ.ರುದ್ರಗೌಡ ಇತರರು ಇದ್ದರು. ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್ ಪ್ರಾರ್ಥಿಸಿದರು.
----