

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಜಿಎಸ್‌ಟಿ ಸುಧಾರಣೆ ಮುಂದಿನ ಪೀಳಿಗೆಯ ಐತಿಹಾಸಿಕ ಆರ್ಥಿಕ ಮೈಲಿಗಲ್ಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ಎನ್. ನಾಗಪ್ಪ ಹೇಳಿದರು.
ಇದುವರೆಗೆ ಯಾವ ಸರ್ಕಾರಗಳೂ ಸರಕುಗಳ ಬೆಲೆ ಇಳಿಕೆ ಮಾಡಿದ ಉದಾಹರಣೆ ಇಲ್ಲ. ಕೇಂದ್ರ ಸರ್ಕಾರ, ದೇಶದ ಶೇ. 90ರಷ್ಟು ದಿನ ಬಳಕೆ ವಸ್ತುಗಳ ಬೆಲೆ ಇಳಿಸಿದ್ದು ಇದರಿಂದ 2 ಲಕ್ಷ ಕೋಟಿಯಷ್ಟು ದೇಶೀಯ ಬಳಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲರಿಗೂ ತೆರಿಗೆ ಹೊರೆ ಇಳಿಸಿದ್ದು ಬಡವರು, ರೈತರು, ಯುವಕರು ಮಹಿಳೆಯರ ಪರವಾಗಿ ದೇಶ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುವ ಸಂಕೇತವಾಗಿದೆ. 12 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದ್ದಾರೆ. ಕಾರ್ಪೋರೇಟ್ ತೆರಿಗೆ ಕಡಿತದಿಂದ ಉದ್ಯೋಗಗಳು ಹೆಚ್ಚಳವಾಗಲಿದೆ ಎಂದರು.
ಜಿಎಸ್‌ಟಿ ಸುಧಾರಣೆ ಕ್ರಮದಿಂದಾಗಿ ಕಡಿಮೆ ತೆರಿಗೆಗಳು ಹೆಚ್ಚಿನ ಖರ್ಚಿಗೆ ಕಾರಣವಾಗಲಿದೆ ಇದು ಉತ್ಪಾದನೆ ಹೆಚ್ಚಿಸಲಿದೆ. ತೆರಿಗೆ ಮೂಲವನ್ನು ವಿಸ್ತರಿಸಲಿದೆ. ಈಗಾಗಲೆ ವಾಹನ ತಯಾರಕರು ಬೆಲೆ ಕಡಿತಗಳನ್ನು ಘೋಷಿಸಿದ್ದಾರೆ ಎಂದು ವಿವರಿಸಿದರು.
ಜಾತಿಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದು ಧರ್ಮದಲ್ಲಿ ಒಡಕು ತರಲು 48ಕ್ಕೂ ಹೆಚ್ಚು ಹೊಸ ಜಾತಿಗಳನ್ನು ಸೇರ್ಪಡೆ ಮಾಡಿ ಧರ್ಮದ್ರೋಹಿ ಆಗಿದ್ದಾರೆ. ಜನರು ಧರ್ಮದ ಕಾಲಂನಲ್ಲಿ ತಪ್ಪದೇ ಹಿಂದು ಎಂದು ಬರೆಸಬೇಕು. ಈಗಾಗಲೆ ತರಳಬಾಳು ಶ್ರೀಗಳು, ಪಂಚಪೀಠ ಇತರೆ ಸ್ವಾಮೀಜಿಗಳು ಕೂಡ ಹಿಂದು ಎಂದು ಬರೆಸಲು ಘೋಷಿಸಿದ್ದಾರೆ.
ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಸೋಮವಾರದಿಂದಲೇ ತುಪ್ಪ, ಬೆಣ್ಣೆ, ಪನೀರ್ ದರ ಇಳಿಕೆಯಾಗಿದೆ. ಕ್ರಿಮಿನಾಶಕ ಹಾಗೂ ಟ್ರಾೃಕ್ಟರ್ ಬಿಡಿಭಾಗಗಳ ದರ ಕಡಿಮೆಯಾಗಿದೆ. ಇದು ರೈತಸ್ನೇಹಿ ಕ್ರಮವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಧನಂಜಯ ಕಡ್ಲೇಬಾಳು, ಎಚ್. ಶ್ರೀನಿವಾಸ್, ಪಿ.ಸಿ. ಶ್ರೀನಿವಾಸ ಭಟ್, ಅನಿಲ್‌ಕುಮಾರ್, ತಾರೇಶನಾಯ್ಕ, ಮಂಜುನಾಥ ಗುತ್ತೂರು, ಜಯರುದ್ರಪ್ಪ, ಹಾಲೇಶನಾಯ್ಕ, ರೇವಣಸಿದ್ದಪ್ಪ, ಎಚ್.ಪಿ.ವಿಶ್ವಾಸ್ ಇದ್ದರು.
----