ಫ್ಲೆಕ್ಸ್ ವಿಚಾರವಾಗಿ ಗುಂಪು ಘರ್ಷಣೆ ನೂರಕ್ಕೂ ಹೆಚ್ಚು ಜನರ ವಿರುದ್ಧ ದೂರು

1001194507.jpg
Published on

ದಾವಣಗೆರೆ: ಇಲ್ಲಿನ ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ (13ನೇ ವಾರ್ಡ್) ನಗರದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ತೆರವು ವಿಚಾರವಾಗಿ ಬುಧವಾರ ತಡರಾತ್ರಿ ಎರಡು ಕೋಮುಗಳ ನಡುವೆ ಗುಂಪು ಘರ್ಷಣೆ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ.

ಐ ಲವ್ ಮೊಹಮ್ಮದ್ ಎಂಬ ಬರಹವಿದ್ದ ಫಲಕವನ್ನು ತೆರವುಗೊಳಿಸುವ ವಿಚಾರವಾಗಿ ವಾಗ್ವಾದ ಘರ್ಷಣೆಗೆ ತಿರುಗಿತ್ತು. ಪೊಲೀಸರ ಮಧ್ಯ ಪ್ರವೇಶದಿಂದಾಗಿ ಫ್ಲೆಕ್ಸ್ ತೆರವಾಗಿದ್ದು, ರಾತ್ರಿಯಿಡೀ ಬಿಗುವಿನ ವಾತಾವರಣ ಕಂಡುಬಂದಿತ್ತು.

ಘಟನೆ ಸಂಬಂಧ, ಆಜಾದ್‌ನಗರ ಠಾಣೆಯಲ್ಲಿ ಉಭಯ ಕೋಮಿನ ನೂರಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಸಹಜ ಸ್ಥಿತಿ ಇದ್ದಾಗ್ಯೂ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದಾರೆ.

ಗ್ಯಾರಿವಿ ಹಬ್ಬದ ನೆಪದಲ್ಲಿ ಕೆಲ ಮುಸ್ಲಿಂ ಯುವಕರು ಐ ಲವ್ ಮೊಹಮ್ಮದ್ ಎಂಬ ಬರಹವಿದ್ದ ಫಲಕವನ್ನು ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಅಳವಡಿಸಿದ್ದರು. ಹಿಂದುಗಳಿರುವ ಕಡೆಯಲ್ಲಿ ಈ ಫ್ಲೆಕ್ಸ್ ಅಳವಡಿಸಿದ್ದು ಸರಿಯಲ್ಲ. ಇದನ್ನು ತೆರವುಗೊಳಿಸುವಂತೆ ಹಿಂದುಗಳ ಒಂದು ಗುಂಪು ಆಗ್ರಹಿಸಿದೆ.

ಇದೇ ವಿಚಾರವಾಗಿ ಮತ್ತೊಂದು ಗುಂಪಿನವರು ಮಾತಿಗಿಳಿದಾಗ ವಾಗ್ವಾದ ನಡೆದಿದೆ. ಕೈಯಲ್ಲಿ ದೊಣ್ಣೆ, ಬಡಿಗೆ, ರಾಡು ಹಿಡಿದುಬಂದಿದ್ದ ಯುವಕರ ಗುಂಪೊಂದು ನಡೆಸಿದ ಹಲ್ಲೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಹಿಂದುಗಳು ಪ್ರಾಣ ರಕ್ಷಣೆಗೆ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಾಗ ಗುಂಪೊಂದು ಮನೆಗಳತ್ತ ಕಲ್ಲು ತೂರಾಟ ನಡೆಸಿತು ಎಂದು ಸ್ಥಳೀಯರು ದೂರಿದ್ದಾರೆ.

ಕಲ್ಲು ತೂರಾಟ ನಡೆದಿಲ್ಲ:

ಫ್ಲೆಕ್ಸ್ ವಿಚಾರವಾಗಿ ಗಲಾಟೆಯನ್ನು ನಮ್ಮ ಸಿಬ್ಬಂದಿ ತೆರಳಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಕಲ್ಲು ತೂರಾಟ ನಡೆದಿಲ್ಲ. ಬದಲಾಗಿ ಇಟ್ಟಿಗೆ ಇರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಹೊರಗಿನವರು ಬಂದು ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಬಗ್ಗೆ ಎಫ್‌ಐಆರ್ ಆಗಿದ್ದು ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕುಸಿದ ಪೊಲೀಸ್, ಜಿಲ್ಲಾಡಳಿತ ಯಂತ್ರ

ಘರ್ಷಣೆಗೀಡಾದ ಕಾರ್ಲ್‌ಮಾರ್ಕ್ಸ್ ನಗರಕ್ಕೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಗುರುವಾರ ಭೇಟಿ ನೀಡಿ ಮಾಹಿತಿ ಪಡೆದರು. ಮಹಜರು ಮಾಡುವವರೆಗೂ ಕಲ್ಲು, ದೊಣ್ಣೆ ಅಲ್ಲೇ ಇರಬೇಕಿತ್ತು. ಆದರೆ ಪೊಲೀಸರೇ ಅಲ್ಲಿದ್ದ ಕಲ್ಲು ತೆಗೆದುಹಾಕಿದ್ದಾರೆ. ಈ ವಿಚಾರವಾಗಿ ಸಬೂಬು ಹೇಳುವುದು ಸರಿಯಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಆಡಳಿತ ಕುಸಿದಿದೆ ಎಂದು ಅವರು ಕಿಡಿ ಕಾರಿದರು.

ಅನೇಕರ ಜನರು ಮನೆಗೆ ನುಗ್ಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಹಿಂದುಗಳ ಮೇಲಿನ ದೌರ್ಜನ್ಯ ಒಳ್ಳೆಯದಲ್ಲ. ಜನಪ್ರತಿನಿಧಿಗಳು ಹೇಳಿದಂತೆ ಅಧಿಕಾರಿಗಳು ಕೇಳುತ್ತಿದ್ದಾರೆ. ಪೊಲೀಸ್ ಇಲಾಖೆ ನ್ಯಾಯಯುತ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಾವು ಧರಣಿ, ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಾವಣಗೆರೆಯಲ್ಲಿ ಹಿಂದು-ಮುಸ್ಲಿಮರು ಸೋದರರಂತೆ ಇದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದು-ಮುಸ್ಲಿಂ ಗಲಾಟೆ ನಡೆದಿಲ್ಲ. ಮಟ್ಟಿಕಲ್‌ನಲ್ಲಿ ಇತ್ತೀಚೆಗೆ ಶಿವಾಜಿ ಪ್ಲೆಕ್ಸ್ ಹಾಕಿದ್ದಾಗ ಗಲಾಟೆ ಮಾಡಿದರು.

ಮುಸ್ಲಿಮರ ಮನೆ ಮುಂದೆ ಗಣಪತಿ ಹೋಗಬಾರದು, ಬ್ಯಾನರ್ ಹಾಕಬಾರದು ಎಂಬುದಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿಕೆ ನೀಡಿ ಮುಸ್ಲಿಮರನ್ನು ಓಲೈಸುವುದು ಸರಿಯಲ್ಲ. ಅವರು ಸರಿಯಾಗಿ ನಡೆದುಕೊಳ್ಳಲಿ. ನನ್ನನ್ನು ಟೀಕಿಸುವ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎಂದೂ ಟೀಕಿಸಿದರು.

ಅವರೊಂದಿಗೆ ಭೇಟಿ ಸಂದರ್ಭದಲ್ಲಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್. ಜಗದೀಶ್ ಇತರರಿದ್ದರು.

ಭಾನುವಾರ ಪ್ರತಿಭಟನೆಯ ಎಚ್ಚರಿಕೆ

ಕಾರ್ಲ್ಸ್‌ಮಾರ್ಕ್ಸ್ ಘಟನೆ ಸಂಬಂಧ ಶನಿವಾರದೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಸೆ. 28ರಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಗಾಯಾಳು ರೇಖಾ ಮನೆ ಹಾಗೂ ಹಿಂದು ಮುಖಂಡರ ಮನೆಗೆ ಭೇಟಿ ನೀಡಿದ ಧೈರ್ಯ ತುಂಬಿದ ರೇಣುಕಾಚಾರ್ಯ, ಘಟನೆಯಲ್ಲಿ ಹಿಂದು ಯುವಕರು, ಮಹಿಳೆೆಯರ ಮೇಲೆ ಹಲ್ಲೆಯಾಗಿದೆ. ಮಾರಕಾಸ್ತ್ರ ಬಳಸಿ ಹೊಡೆದಿದ್ದಾರೆ. ಇದು ಸರಿಯಲ್ಲ ಎಂದರು.

ಇಂದು ಬೆಳಗ್ಗೆ ಕೂಡ ಹನುಮಂತಪ್ಪ ಅವರ ಮನೆಗೆ ನೂರಾರು ಮಹಿಳೆಯರು ನುಗ್ಗಿದ್ದಾರೆ. ಇದು ಪಾಕಿಸ್ತಾನವಾ? ಬಾಂಗ್ಲಾ ದೇಶವಾ ಎಂದು ಪ್ರಶ್ನಿಸಿದ ಎಂಪಿಆರ್, ಹಿಂದುಗಳು ನಿರಪರಾಧಿಗಳು. ಅವರ ವಿರುದ್ಧ ಬಿ ರಿಪೋರ್ಟ್ ಹಾಕಬೇಕು. ಹಿಂದು ದಲಿತ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ದೇಶದ್ರೋಹಿಗಳು, ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಎಂಪಿಆರ್ ಜತೆ ಬಿ.ಜಿ. ಅಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net