

ದಾವಣಗೆರೆ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸೂಕ್ತ ಸಮಯಕ್ಕೆ ದಾವಣಗೆರೆಯಿಂದ ಪಲ್ಲಾಗಟ್ಟೆ ಮಾರ್ಗವಾಗಿ ಉಜ್ಜಿನಿ ಗ್ರಾಮಕ್ಕೆ ಬಸ್ ಸಂಚಾರಕ್ಕೆ ಅನುವು ಮಾಡುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸಂಸದರ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕ ಕುಂದು ಕೊರತೆ ಸಭೆ ವೇಳೆ, ಕೆಎಸ್‌ಆರ್‌ಟಿಸಿ ಡಿಸಿ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು.
ಪಲ್ಲಾಗಟ್ಟೆ ಗ್ರಾಮಕ್ಕೆ ಬೆಳಗ್ಗೆ 6 ಮತ್ತು 8 ಗಂಟೆಗೆ ಬಸ್ ಸೌಕರ್ಯವಿದೆ. ಆದರೆ ನಮಗೆ ಶಾಲಾ ಕಾಲೇಜು ತಲುಪಲು ಈ ಅವಧಿ ಸೂಕ್ತವಾಗಿಲ್ಲ. ವೇಲೆ ಬದಲಾಯಿಸಿಕೊಡಿ ಎಂದು ಗ್ರಾಮದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಇದಕ್ಕೆ ಸಂಸದೆ ಸ್ಪಂದಿಸಿದರು.
ತೋಳಹುಣಸೆ ಗ್ರಾಮದಲ್ಲಿ ನಾವು 50-60 ವರ್ಷದಿಂದ ನೆಲೆಸಿದ್ದೇವೆ. ಈ ಹಿಂದೆ ನಮಗೆ ಹಕ್ಕುಪತ್ರ ನೀಡಲಾಗಿತ್ತು. ಈಗ ಅದೇ ಜಾಗದಲ್ಲಿ ಬೇರೆಯವರ ಹೆಸರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಅಲ್ಲಿನ ಮಹಿಳೆಯರು ದೂರು ನೀಡಿದರು.
ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರಿಗೆ ಕರೆ ಮಾಡಿ, ಸದರಿ ಜಾಗದಲ್ಲಿ ಜಿಲ್ಲಾಡಳಿತದೊಂದಿಗೆ ಜಂಟಿ ಸರ್ವೇ ಮಾಡಿಸಿ 2-3 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದರು. ವರದಿ ಬಂದ ನಂತರದಲ್ಲಿ ನನ್ನನ್ನು ಕಾಣಿ ಎಂದು ದೂರುದಾರರಿಗೆ ಸಂಸದರು ತಿಳಿಸಿದರು.
ನಾವು ಬಡವರು. ಬಿಪಿಎಲ್ ಪಟ್ಟಿಯಲ್ಲಿ ಮಗಳ ಹೆಸರು ಮುದ್ರಣವಾಗಿಲ್ಲ. ಹೀಗಾಗಿ ಕಾಯಿಲೆಯೊಂದರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಹಣ ಭರಿಸಲು ಆಗುತ್ತಿಲ್ಲ ಎಂದು ಎಲೆಬೇತೂರಿನ ವ್ಯಕ್ತಿಯೊಬ್ಬರು ಅವಲತ್ತುಕೊಂಡರು. ಬಾಲಕಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ವಹಿಸುವುದಾಗಿ ಸಂಸದೆ ಭರವಸೆ ನೀಡಿದರು.
ಜಮೀನಿನ ಖಾತೆ ಸಮಸ್ಯೆ, ಇ-ಸ್ವತ್ತು, ಜಮೀನಿನ ಪಹಣಿ ನೀಡಲು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುತ್ತಿದ್ದು ನಮ್ಮ ಕೆಲಸಕ್ಕೆ ತೊಮದರೆಯಾಗಿದೆ ಎಂಬುದಾಗಿ ಕೆಲ ಗ್ರಾಮಗಳ ಜನರು ದೂರು ಹೇಳಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹಾರಕ್ಕೆ ತಾಕೀತು ಮಾಡಿದರು.
ಹರಿಹರ, ಜಗಳೂರು ಸೇರಿ ವಿವಿಧ ಭಾಗದ ಸಾರ್ವಜನಿಕರು ಬಂದಿದ್ದರು. ಉದ್ಯೋಗ, ದೇವಸ್ಥಾನ ಜೀಣೋದ್ದಾರಕ್ಕೆ ನೆರವು, ರಸ್ತೆ ನಿರ್ಮಾಣಕ್ಕೆ ಅನುದಾನ ಇತ್ಯಾದಿ ಮನವಿ ಸಲ್ಲಿಸಿದರು. ಶುಕ್ರವಾರ ಒಂದೇ ದಿನ ಸುಮಾರು 52 ಅರ್ಜಿ ಸಲ್ಲಿಕೆಯಾದವು.
---