ಮಳೆಗಾಲಕ್ಕೆ ‘ಹಸಿರುಪಥ’ದ ರಹದಾರಿ! ರಸ್ತೆ ಬದಿ 38,925 ಸಸಿ ಬೆಳೆಸಲು ಗುರಿ

1000898829.jpg
Published on

ಡಿ.ಎಂ.ಮಹೇಶ್, ದಾವಣಗೆರೆ: ರಾಜ್ಯ ಬಜೆಟ್‌ನಲ್ಲಿ ಘೋಷಿತ ‘ಹಸಿರುಪಥ’ ಯೋಜನೆ ಅನುಷ್ಠಾನಕ್ಕೆ ಸಾಮಾಜಿಕ ಅರಣ್ಯ ಇಲಾಖೆ ಸಜ್ಜಾಗಿದೆ. ಮಳೆಗಾಲದಲ್ಲಿ ಜಿಲ್ಲಾ ರಸ್ತೆ ಬದಿಗಳಲ್ಲಿ ಒಟ್ಟು 38,925 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಿದೆ.

ಜಿಲ್ಲೆಯಲ್ಲಿ ಇದುವರೆಗೆ ಗಿಡಗಳನ್ನು ನೆಡದ 113 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಉಪಗ್ರಹ ಆಧಾರಿತವಾಗಿ ಗುರುತಿಸಲಾಗಿದ್ದು, ಇದರಲ್ಲಿ 83 ಕಿ.ಮೀ. ವ್ಯಾಪ್ತಿಯಲ್ಲಿ ಹಸಿರು ಹೊದಿಕೆ ನಿರ್ಮಿಸಲಾಗುತ್ತಿದೆ. ನರೇಗಾ, ಸಾಮಾಜಿಕ ಅರಣ್ಯ ಯೋಜನೆಗಳಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

14-20 (ಇಂಚು) ಅಳತೆಯ ಬ್ಯಾಗ್‌ಗಳಲ್ಲಿ 8ರಿಂದ 10 ಅಡಿ ಎತ್ತರದ ಸಸಿಗಳು ನೆಡಲು ಅಣಿಯಾಗಿವೆ. ಜಿಲ್ಲೆಯ ಸಂಗೇನಹಳ್ಳಿ, ಕೊಗ್ಗನೂರು, ಬಸವರಾಜಪುರ, ಕೊಂಡಜ್ಜಿ ಹಾಗೂ ಸುಂಕದಕಟ್ಟೆ ಸಸ್ಯಪಾಲನಾ ಕೇಂದ್ರಗಳಲ್ಲಿ ಪಾಲನೆಗೊಂಡಿವೆ.

ನೆಟ್ಟ ಸಸಿಗಳ ನಿರ್ವಹಣೆಗೆ ಮೂರು ವರ್ಷದ ಕಾಲಾವಧಿ ಇದೆ. ಸಸಿಗಳ ಕಾವಲು ಮತ್ತು ರಕ್ಷಣೆಗೆ ಪ್ರತಿ 3 ಕಿಮೀಗೆ ಒಬ್ಬರಂತೆ ವಾಚ್ ಆ್ಯಂಡ್ ವಾರ್ಡ್‌ಗಳನ್ನು ನೇಮಿಸಲಾಗುತ್ತದೆ. ನರೇಗಾದಡಿ ಅವರಿಗೆ ಕೂಲಿ ಸಿಗಲಿದೆ.

ಲಭ್ಯ ಫಾರೆಸ್ಟ್ ಗಾರ್ಡ್‌ಗಳು, ಉಪ ವಲಯ ಅರಣ್ಯಾಧಿಕಾರಿ ಮೇಲುಸ್ತುವಾರಿ ವಹಿಸುವರು. ಈಗಾಗಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹಸಿರುಪಥ ಜಾರಿಗೆ ಅಂದಾಜು 4.5 ಕೋಟಿ ರೂ. ವೆಚ್ಚವಾಗಲಿದೆ.

----

ಎಲ್ಲೆಲ್ಲಿ ಎಷ್ಟು ನೆಡುತೋಪು?

ಉದ್ದೇಶಿತ ಹಸಿರುಪಥದಡಿ ದಾವಣಗೆರೆ ತಾಲೂಕಿನಲ್ಲಿ 8760, ಹರಿಹರ- 6510, ಹೊನ್ನಾಳಿ- 7265, ಚನ್ನಗಿರಿ-6780, ಜಗಳೂರು ತಾಲೂಕಿನಲ್ಲಿ 9610 ಗಿಡಗಳನ್ನು ನೆಡುವ ಉದ್ದೇಶವಿದೆ.

ಬಿಸ್ತುವಳ್ಳಿ, ಅಸಗೋಡು, ಕಲ್ಲೇದೇವರಪುರ, ಹಾಲೇಕಲ್ಲು, ತೋರಣಗಟ್ಟೆ, ಗುತ್ತಿದುರ್ಗ, ಸಾರಥಿ, ಕಂಚಿಗನಾಳ್, ಮಾಸಡಿ, ಅರಬಘಟ್ಟ ಇತರೆ ಗ್ರಾಪಂ ವ್ಯಾಪ್ತಿಯ ರಸ್ತೆಗಳ ಇಕ್ಕೆಲದಲ್ಲಿ ಈ ನೆಡುತೋಪು ಒಂದು ವರ್ಷದಲ್ಲಿ ಕಾಣಸಿಗಲಿದೆ.

ಜಂಬುನೇರಳೆ, ಬೇವು, ಹೊಳೆೆಮತ್ತಿ, ತಪಸಿ, ಹೊನ್ನೆ, ಆಲ, ಅರಳಿ, ಬಸರಿ, ಗೋಣಿ, ನಾಗಲಿಂಗಪುಷ್ಪ, ಮಹಾಘನಿ, ಶಿವನಿ ಮೊದಲಾದ 25 ಜಾತಿಗಳ ಸಸಿಗಳನ್ನು ನೆಡಲಿದೆ. ಇದರಲಿ ಹಲವು ಹಣ್ಣಿನ ಸಸಿಗಳಿದ್ದು ಪಕ್ಷಿಗಳಿಗೆ ಅನುಕೂಲವಾಗಲಿದೆ. ವೆಚ್ಚದಾಯಕ ಟ್ರೀಗಾರ್ಡ್ ಬದಲಾಗಿ ಕೋಲು ಹಾಗೂ ಜಾಲಿ ಮುಳ್ಳಿನ ರಕ್ಷಣೆ ಒದಗಿಸಲಾಗುತ್ತಿದೆ.

ಎಸ್‌ಎಫ್‌ಪಿಯಡಿ 23 ಸಾವಿರ ಗಿಡ

ಸಾಮಾಜಿಕ ಅರಣ್ಯ ಯೋಜನೆ ಕಾರ್ಯಕ್ರಮದಡಿ ಈ ವರ್ಷಕ್ಕೆ ಶಾಲೆ, ಗೋಮಾಳ, ಸಂಘ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 84 ಹೆಕ್ಟೇರ್ ಪ್ರದೇಶದಲ್ಲಿ 10-16 ಬ್ಯಾಗ್ ಅಳತೆಯ 23,285 ಸಾವಿರ ಗಿಡಗಳನ್ನು ನೆಡುವ ಉದ್ದೇಶವಿದೆ.

ಕಳೆದ ಸಾಲಿನಲ್ಲಿ ಎಸ್‌ಎಫ್‌ಪಿ ಅಡಿಯಲ್ಲಿ 432 ಹೆ.ನಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದೆ. 1.38 ಲಕ್ಷ ಸಸಿಗಳನ್ನು ನೆಡಲಾಗಿದೆ. ರೈತರಿಗೆ 1 ಲಕ್ಷ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿತ್ತು.

ಈ ಬಾರಿ ಒಟ್ಟು 1,58996 ಗಿಡಗಳನ್ನು ಬೆಳೆಸಲಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ 96786 ಗಿಡಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಮುಂದಿನ ಮಳೆಗಾಲಕ್ಕೆ 1.93 ಲಕ್ಷ ಸಸಿಗಳನ್ನು ಬೆಳೆಸುವ ಗುರಿ ಇಲಾಖೆಗಿದೆ.

ಸೀಡ್ ಬೆಡ್ ಹಾಗೂ ಸಣ್ಣ ಬ್ಯಾಗ್ ಎರಡು ರೀತಿಯಲ್ಲಿ ಬೀಜ ಹಾಕಿ ಬೆಳೆಸುತ್ತೇವೆ. ಕೆಲವು 8 ದಿನದಿಂದ ತಿಂಗಳ ಅವಧಿಯಲ್ಲಿ ಮೊಳಕೆ ಹೊಡೆಯಲಿವೆ. ಬೀಜ ಮೊಳಕೆ ಹೊಡೆದ ಎಂಟು ದಿನದಿಂದ ಹುಟ್ಟಿದ ಶೇ.30 ರಷ್ಟು ಗಿಡಗಳು ಬಲಯುತವಾಗಿರುತ್ತವೆ. ಅಂಥವನ್ನು ನರ್ಸರಿಯಲ್ಲಿ ಇರಿಸಲಾಗುತ್ತದೆ. ಇಂತಹ ನಿರಂತರ ಪ್ರಕ್ರಿಯೆಯ ತಂತ್ರ ಬಳಸಿದ್ದರಿಂದಲೇ 2013ರಿಂದ 2017ರ ಅವಧಿಯಲ್ಲಿ ಸುಮಾರು 50 ರಸ್ತೆಗಳಲ್ಲಿ ನೆಡಲಾಗಿದ್ದ ಗಿಡಗಳ ಪೈಕಿ ಶೇ.90ರಷ್ಟು ಉಳಿದಿವೆ ಎಂಬುದು ಅಧಿಕಾರಿಗಳ ಸಮರ್ಥನೆ.

.....

ರಾಜ್ಯ ಸರ್ಕಾರದ ಕಾರ್‌ಸ್ಯಾಕ್ ಸಂಸ್ಥೆಯು ಭೂಮಿಯ ಪ್ರತಿ ಭಾಗದ ವಿವರ ನೀಡಲಿದೆ. ಅರಣ್ಯ ಇಲಾಖೆಯಡಿ ಯಾವ ರಸ್ತೆಗಳಲ್ಲಿ ಗಿಡ ನೆಡಲಾಗಿದೆ ಎಂಬುದರ ಬಗ್ಗೆ ಮ್ಯಾಪ್ ತಯಾರಿಸಲಿರುವ ಈ ಸಂಸ್ಥೆಗೆ ಇಲಾಖೆ ಡೇಟಾ ನೀಡಬೇಕು. ಹಾಗೆ ದಾಖಲಾದ ಮಾಹಿತಿಯನ್ವಯ ನಿರ್ವಾತ ರಸ್ತೆಗಳನ್ನು ಹಳದಿ ಗುರುತಿನಡಿ ತೋರಿಸಲಿದೆ. ಅಂತಹ ರಸ್ತೆಗಳಲ್ಲಿ ಗಿಡ ನೆಡಲು ಯೋಜನೆ ರೂಪಿಸಲಾಗುತ್ತಿದೆ. ಉಪಗ್ರಹ ಆಧಾರಿತ ವ್ಯವಸ್ಥೆಯಡಿ, ಗಿಡ ನೆಟ್ಟಿರುವುದು ಮತ್ತು ಅದರ ಚಟುವಟಿಕೆ ಕುರಿತಂತೆ ಯಾರು ಬೇಕಾದರೂ ನೋಡಬಹುದಾದ ಅವಕಾಶವಿದೆ. ಸಿಬ್ಬಂದಿ, ದಿನವೂ ನೆಟ್ಟ ಗಿಡಗಳ ಕುರಿತಂತೆ ಹಸಿರುಪಥ ಜಿಐಎಸ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ.

---

ಸೆಟಲೈಟ್ ಮ್ಯಾಪ್ ಆಧಾರದಡಿ ಈ ವರ್ಷ ‘ಹಸಿರುಪಥ’ ಯೋಜನೆಯಡಿ ನೆಡುತೋಪು ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ವಿಶೇಷ ಆಸಕ್ತಿಯಿಂದ 8 ತಿಂಗಳ ಕಾಲ ಎಂಟರಿಂದ 10 ಅಡಿ ಎತ್ತರದ ಗಿಡಗಳನ್ನು ಬೆಳೆಸಲಾಗಿದೆ.

ಸುರೇಶ್ ಬಿ. ಇಟ್ನಾಳ್

ದಾವಣಗೆರೆ ಜಿಪಂ ಸಿಇಒ.

....

ಹಸಿರುಪಥ ಯೋಜನೆಗೆ ಜೂ. 5ರಂದು ಜನಪ್ರತಿನಿಧಿಗಳ ಮೂಲಕ ಅಧಿಕೃತ ಚಾಲನೆ ನೀಡಲಾಗುವುದು. ಹಸಿರ ಹೊದಿಕೆಯಿಂದ ಪಕ್ಷಿಗಳಿಗೆ ಅನುಕೂಲವಾಗಲಿದೆ. ಈಗಿರುವ ಹಮಾಮಾನ ವೈಪರೀತ್ಯ ತಗ್ಗಿಸಿ, ಪರಿಸರ ಸಮತೋಲನವಾಗಿಡಲು ಅನುಕೂಲವಾಗಲಿದೆ.

ಜಿ. ಗೋಪ್ಯಾನಾಯ್ಕ

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net