ಕೋಮು ಸಂಘರ್ಷಕ್ಕೆ ಸರ್ಕಾರದ ದ್ವಿಮುಖ ನೀತಿ ಕಾರಣ

1000916090_20250602011504261.jpg
Published on

ದಾವಣಗೆರೆ: ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣ, ದ್ವಿಮುಖ ನೀತಿ ಕಾರಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿ ಕಾರಿದರು.

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಅವರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ತೆರಳಿ ಸಾಂತ್ವನ ಹೇಳಲಿಲ್ಲ. ಮುಸ್ಲಿಮರ ಮತಗಳು ಸಿಗುವುದಿಲ್ಲ ಎಂಬ ಭಯದಿಂದ ಅಲ್ಲಿಗೆ ಹೋಗಲಿಲ್ಲ. ಅಬ್ದುಲ್ ರೆಹಮಾನ್ ಹತ್ಯೆಯಾದಾಗ ಅವರ ಮನೆಗೆ ಭೇಟಿ ನೀಡಿದರು. ಈ ಇಬ್ಬಗೆ ನೀತಿಯಿಂದಾಗಿ ಕೋಮು ಸಂಘರ್ಷ ನಡೆಯುತ್ತಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕೆ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಯಾವುದೇ ಪ್ರಗತಿ ಸಾಧಿಸದ ಅಸಮರ್ಥರಾದ ಇವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರದಲ್ಲಿ ರೈತರಿಗೆ ರಸಗೊಬ್ಬರ, ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುವಂತೆ ಪ್ರತಿಭಟನೆ ಮಾಡಿದ ಶಿಕ್ಷಕನನ್ನೇ ಅಮಾನತು ಮಾಡಲಾಗಿದೆ. ನಿಮ್ಮ ವೈಫಲ್ಯ ಬಯಲಿಗೆ ಎಳೆದಿದ್ದಕ್ಕೆ ಈ ರೀತಿ ಕ್ರಮ ವಹಿಸುತ್ತೀರಾ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

ಬಿಜೆಪಿ ವಿರುದ್ಧದ ಆರೋಪಕ್ಕೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿದೆ. ಈಗಿನ ಕಾಂಗ್ರೆಸ್ ಸರ್ಕಾರ 60 ಪರ್ಸೆಂಟೇಜ್‌ನ ಹಾಗೂ ಜನವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.

ಹಿರಿಯ ನಟ ಕಮಲ್ ಹಾನಸ್ ಅವರ ಅಭಿನಯದ ಬಗ್ಗೆ ಅಭಿಮಾನ ಇದೆ. ಆದರೆ ಕನ್ನಡಕ್ಕೆ ಅಪಮಾನಿಸಿದ್ದನ್ನು ನಾವು ಸಹಿಸುವುದಿಲ್ಲ. ಆತನ ವಿರುದ್ಧ ಸುಮೋಟೊ ಕೇಸ್ ದಾಖಲಿಸಿ ಕಟಕಟೆಯಲ್ಲಿ ನಿಲ್ಲಿಸಬೇಕು. ಕನ್ನಡ ವಿರೋಧಿಗಳ ವಿರುದ್ಧ ಈ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net