

ದಾವಣಗೆರೆ: ತಾಲೂಕಿನ ಕಂದನಕೋವಿ ಗ್ರಾಮದ ಸರ್ಕಾರಿ ಶಾಲೆಯನ್ನು ನಗರದ ಬಾಪೂಜಿ ಹೈಸ್ಕೂಲ್‌ನ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್, 5 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿ ಗಮನ ಸೆಳೆದಿದೆ.
ಸುಣ್ಣ-ಬಣ್ಣ ಬಳಿಸಿ, ಗೋಡೆ ಚಿತ್ರಗಳನ್ನು ಬರೆಸುವ ಜತೆಗೆ ಶಾಲಾ ಕಟ್ಟಡವನ್ನು ಸುಂದರಗೊಳಿಸಲಾಗಿದೆ. ಈ ನವೀಕೃತ ಶಾಲೆಯ ಉದ್ಘಾಟನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜ.4ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಸ್.ಟಿ.ವೀರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2022ರಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ಶಾಮನೂರಿನ ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಣ ಮಾಡಲಾಗಿತ್ತು. ಅಲ್ಲದೆ ಡಾಲರ್ಸ್ ಕಾಲನಿಯ ಉದ್ಯಾನದ ಮೇಲ್ವಿಚಾರಣೆ ನಡೆಸಲಾಗಿದೆ. ಈ ಬಾರಿ ಕಂದನಕೋವಿ ಶಾಲೆಗೆ ಜೀವ ತುಂಬಲಾಗಿದೆ ಎಂದು ಹೇಳಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎಸ್. ಬಸವಂತಪ್ಪ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಜಿ. ಕೊಟ್ರೇಶ್, ಡಯಟ್ ಪ್ರಾಚಾರ್ಯೆ ಎಸ್. ಗೀತಾ, ಗ್ರಾಪಂ ಅಧ್ಯಕ್ಷೆ ಭಾರತಮ್ಮ ಮಹೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜಪ್ಪ ಸೇರಿ ಹಲವರು ಭಾಗವಹಿಸುವರು ಎಂದು ತಿಳಿಸಿದರು.
ಗ್ರಾಮಸ್ಥರಲ್ಲಿ ಶಾಲೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಎಸ್‌ಎಸ್ ಕೇರ್ ಟ್ರಸ್ಟ್‌ನಡಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಕಿರುವಾಡಿ ವೀರೇಶ್, ಡಿ.ಎಸ್.ಹೇಮಂತ್, ಸಂಜಯ್ ರೇವಣಕರ್, ಶುಭಾಷಿಣಿ, ಐನಹಳ್ಳಿ ಶುಭಾ, ಹೊನ್ನೂರು ಗಿರೀಶ್, ಪ್ರಭಾಕರ್, ಲಕ್ಷ್ಮೀಕಾಂತ್ ಇದ್ದರು.
---