ಕಲಾವಿದರು, ಕಸಾಪಕ್ಕೆ ಸರ್ಕಾರದ ಅಸಹಕಾರ - ವಾಮದೇವಪ್ಪ ಬೇಸರ

1001259307.jpg
Published on

ದಾವಣಗೆರೆ: ಕನ್ನಡದ ಚಟುವಟಿಕೆ ನಡೆಸುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ನಾಟಕ ಕಲಾವಿದರಿಗೆ ಸರ್ಕಾರದ ನೀತಿಗಳಿಂದಾಗಿ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ವಿಷಾದ ವ್ಯಕ್ತಪಡಿಸಿದರು.

ಸ್ಫೂರ್ತಿ ಸಾಂಸ್ಕೃತಿಕ ಕಲಾ ಸಂಘ, ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಟಕಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ದಾವಣಗೆರೆ ನಾಟಕ ಕಲೆಯ ತವರೂರು. ಇಲ್ಲಿ ನೆಲೆ ಕಂಡಿದ್ದ ಅನೇಕ ನಾಟಕ ಕಂಪನಿಗಳು ಈಗ ಕಣ್ಮರೆಯಾಗಿವೆ. ಅನುದಾನ ಸಿಗದಿದ್ದರಿಂದ ಕಲಾವಿದರು ಕೂಡ ಇದರಿಂದ ವಿಮುಖರಾಗುತ್ತಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಬೇಕಿದ್ದ ಬಾಕಿ ಅನುದಾನ ನೀಡದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರ ಪರಿಣಾಮ ಅನುದಾನ ಬರಬೇಕಾಯಿತು ಎಂದು ಹೇಳಿದರು.

ಸರ್ಕಾರದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿರಲಿ ನಾಟಕ, ಬಯಲಾಟ, ಸಂಗೀತ, ನೃತ್ಯ ಮೊದಲಾದ ಕಲೆಗಳನ್ನು ಪಾಲನೆ ಮಾಡಬೇಕು. ಇಲ್ಲವಾದಲ್ಲಿ ನಾಡಿನ ಸಂಸ್ಕೃತಿಯನ್ನೇ ಮರೆತಂತಾಗಲಿದೆ ಎಂದೂ ಸೂಕ್ಷ್ಮವಾಗಿ ತಿಳಿಸಿದರು.

ಮುಖ್ಯಮಂತ್ರಿ ಅವರು ನುಡಿದಂತೆ ನಡೆವವರು. ಆದರೆ ಇದುವರೆಗೆ ದಾವಣಗೆರೆಯಲ್ಲಿ ನಡೆಯಬೇಕಿದ್ದ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಿದಿರುವುದು ಅಚ್ಚರಿಯಾಗಿದೆ. ಬಜೆಟ್‌ನಲ್ಲಿ ಹಣ ನಿಗದಿಯಾಗಿದ್ದು ಜಿಲ್ಲಾ ಸಚಿವರ ಮೂಲಕ ಸಿಎಂಗೆ ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಕಾರ್ಯಗತವಾಗಿಲ್ಲ. ಇನ್ನು ಮುಂದಿನ ದಿನದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜನರಿಗೆ ಮೂಲ ಸೌಕರ್ಯ ಒದಗಿಸಬೇಕಾದ್ದು ಸಹ ಸರ್ಕಾರದ ಆದ್ಯ ಕರ್ತವ್ಯ. ಆದರೆ ಬೆಂಗಳೂರಿನಲ್ಲಿ ರಸ್ತೆಗಳ ಗುಂಡಿ ಮುಚ್ಚದ್ದರಿಂದ ಅನಾಹುತಗಳು ನಡೆದಿವೆ. ಅದೃಷ್ಟವಶಾತ್ ದಾವಣಗೆರೆಯಲ್ಲಿ ಇಂತಹ ಅನಾಹುತ ನಡೆದಿಲ್ಲ ಎಂದೂ ಹೇಳಿಕೊಂಡರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಸಲಹೆಗಾರ ಎಚ್.ಕೆ. ಲಿಂಗರಾಜ್ ಮಾತನಾಡಿ ಇಂದು ಜಾನಪದ ಕಲೆಗಳು ನಶಿಸುತ್ತಿವೆ. ಯುವಕರು ಇದರತ್ತ ಸುಳಿಯುತ್ತಿಲ್ಲ. ಸೋಬಾನೆ ಪದಗಳು ಅಜ್ಜಿಯರಿಗೆ ಸೀಮಿತವಾಗಿವೆ. ಯುವತಿಯರು ನಾಚಿಕೆ ಪಟ್ಟುಕೊಳ್ಳುವ ಸ್ಥಿತಿ ಇದೆ. ಹೀಗಾಗಿ ಹಳ್ಳಿಗಳಲ್ಲಿನ ಜನರ ಕಲೆ ಗುರುತಿಸಿ ಹಳೆಯ ಕಲೆ ಉಳಿಸುವ ಜತೆಗೆ ನವ ಕಲಾವಿದರನ್ನು ಹುಟ್ಟು ಹಾಕುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಯರಗುಂಟೆ ಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಮಾತನಾಡಿ ಚಿಂದೋಡಿ ಮನೆತನ, ಗುಡಿಗೇರಿ ಬಸವರಾಜ್, ಸುಧೀರ್ ಮೊದಲಾದವರ ನಾಟಕ ಕಂಪನಿಗಳನ್ನು ದೇವನಗರಿ ಸಲಹಿ ಕಲಾವಿದರನ್ನು ಸಂತೈಸುತ್ತಿತ್ತು. ಕಲೆಗಳ ಉಳಿವು ಕಲಾವಿದರ ಕೈಯಲ್ಲಿದೆ ಎಂದು ಹೇಳಿದರು.

ನಾಟಕ, ಸಂಗೀತ ಕಲೆಗಳು ನೆಮ್ಮದಿ ಜತೆಗೆ ಮನಸ್ಸಿಗೆ ಮುದ ನೀಡಲಿವೆ. ಜೆ.ಎಚ್. ಪಟೇಲರು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರೂ ಸಂಗೀತ ಪ್ರೇಮಿಗಳಾಗಿದ್ದರು. ಪಾಶ್ಚಿಮಾತ್ಯ ಸಂಗೀತಕ್ಕೆ ಗೌರವ ನೀಡುವುದನ್ನು ಕೈಬಿಟ್ಟು ಭಾರತೀಯ ಸಂಗೀತ, ಜಾನಪದ ಕಲೆ ಉಳಿಸಿದರೆ ಅದುವೇ ಕನ್ನಡ ನಾಡು ನುಡಿಗೆ ಸಲ್ಲಿಸುವ ನಿಜವಾದ ಸೇವೆ ಆಗಲಿದೆ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಎ.ಎನ್. ಜಗದೀಶ್, ಭಜನಾ ಕಲಾವಿದ ಮಲ್ಲೇಶ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಚ್‌ಎನ್. ಶಿವಕುಮಾರ್, ಕವಯತ್ರಿ ಎಚ್.ಕೆ. ಸತ್ಯಭಾಮಾ ಮಂಜುನಾಥ್, ರಂಗ ಅನಿಕೇತನ ಅಧ್ಯಕ್ಷೆ ಎಚ್.ಎನ್. ಸುಧಾ, ಸ್ಫೂರ್ತಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಸಿ.ಮಮತಾ ಇದ್ದರು. ಇದೇ ವೇಳೆ ತುಮಕೂರು ತಾಲೂಕು ಮೆಳೇಹಳ್ಳಿ ಡಮರುಗ ರಂಗ ಸಂಪನ್ಮೂಲ ಕೇಂದ್ರದ ಕಲಾವಿದರಿಂದ ‘ಶರಣೆ ನೀಲಾಂಬಿಕೆ’ ಹಾಗೂ ‘ಯಾರದೀ ಬುರುಡೆ?’ ನಾಟಕಗಳು ಪ್ರದರ್ಶಿತವಾದವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net