

ದಾವಣಗೆರೆ: ಹರಿಹರ ಗ್ರಾಮದೇವತೆ ಊರಮ್ಮದೇವಿ ಹಬ್ಬವನ್ನು 2025ರ ಮಾರ್ಚ್ 18 ರಿಂದ 22 ರವರೆಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲು ಕಸಬಾ ಮತ್ತು ಮಹಜೇನಹಳ್ಳಿ ಗ್ರಾಮದ ಮುಖಂಡರು ಶುಕ್ರವಾರ ತೀರ್ಮಾನಿಸಿದರು.
ಮೂಲ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಹಿಂದಿನ ಹಬ್ಬದ ಲೆಕ್ಕಪತ್ರ ಮಂಡಿಸಿ ಮುಂದಿನ ಹಬ್ಬದ ದಿನಾಂಕ ನಿರ್ಣಯಿಸಲಾಯಿತು.
ಸಮಿತಿ ಅಧ್ಯಕ್ಷ ಕೆ.ಅಣ್ಣಪ್ಪ ಪೈಲ್ವಾನ್ ಮಾತನಾಡಿ, 2025ರ ಮಾರ್ಚ್ 26 ರೊಳಗೆ ಉತ್ಸವ ಮಾಡಬೇಕಿದೆ ಎಂದು ಸಭೆ ಗಮನಕ್ಕೆ ತಂದರು.ಮಕ್ಕಳ ಪರೀಕ್ಷೆ ಕಾರಣ ಉತ್ಸವ ಮುಂದಕ್ಕೆ ಹಾಕುವುದು ಸೂಕ್ತ ಎಂದು ಅನೇಕರು ಗಮನಸೆಳೆದರು. ನಂತರ ಸಂಪ್ರದಾಯದಂತೆ ಮಾರ್ಚನಲ್ಲೇ ಉತ್ಸವ ಸೂಕ್ತ ಎಂದು ಅಲ್ಲಿದ್ದವರು ಅಭಿಪ್ರಾಯಪಟ್ಟರು.
ಹರೀಶ ಶಂಕರ ಜೋಯಿಸ್ ಅವರನ್ನು ಸಭೆಗೆ ಆಹ್ವಾನಿಸಿದಾಗ ಅವರು ಪಂಚಾಂಗ ನೋಡಿಸಿದಾಗ 2025ರ ಮಾರ್ಚ್18 ರಿಂದ 22 ರವರೆಗೆ ಉತ್ಸವ ಆಚರಣೆಗೆ ದಿನ ಪ್ರಶಸ್ತವಿದೆ ಎಂದರು. ಮುಖಂಡರು ಉಧೋ.,ಉಧೋ ಎಂದು ಸಹಮತ ವ್ಯಕ್ತಪಡಿಸಿದರು.
ಅಧ್ಯಕ್ಷ ಸ್ಥಾನ ಮಹಜೇನಹಳ್ಳಿಗೆ
ಗ್ರಾಮದೇವತೆ ಉತ್ಸವ ಸಮಿತಿ ಅಧ್ಯಕ್ಷ,ಕಾರ್ಯದರ್ಶಿ, ಸಹ ಕಾರ್ಯ ದರ್ಶಿ ಈ ಮೂರು ಸ್ಥಾನಗಳು ಮಹಜೇನಹಳ್ಳಿ ಭಾಗಕ್ಕೆ, ಖಜಾಂಚಿ ಸ್ಥಾನ ಕಸಬಾ ಗ್ರಾಮಕ್ಕೆ ಬಂದ ಕಾರಣ ಈ ಸ್ಥಾನಗಳಿಗೆ ಪೈಪೋಟಿ ಏರ್ಪಟ್ಟಿರುವುದು ಸತ್ಯ. ಅ.29ರ ಬೆಳಗ್ಗೆ 11ಕ್ಕೆ ಊರಮ್ಮ ದೇವಿ ದೇವಸ್ಥಾನದಲ್ಲಿ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುತ್ತದೆ ಎಂದು ಪ್ರಕಟಿಸಲಾಯಿತು.
ಗೌಡ್ರು ಲಿಂಗರಾಜ್ ಪಟೇಲ್, ಗೌಡ್ರು ಚನ್ನಬಸಪ್ಪ, ಬೆಣ್ಣೆ ರೇವಣಸಿದ್ದಪ್ಪ, ಶೇರಾಪುರ ರಾಜಪ್ಪ, ಫಾಲಾಕ್ಷಪ್ಪ, ಜಿ ನಂಜಪ್ಪ, ಗೌಡ್ರು ಪುಟ್ಟಪ್ಪ, ಕೆ ವಿ.ಬಸವರಾಜ್, ಕೆ.ಬಿ ರಾಜಶೇಖರ್, ಬೆಣ್ಣೆ ಸಿದ್ದೇಶ್ ಇತರರಿದ್ದರು.