

ದಾವಣಗೆರೆ :ವಿದ್ಯಾರ್ಥಿಗಳ ಶೈಕ್ಷಣಿಕ ಬುದ್ಧಿಮಟ್ಟ ಹೆಚ್ಚಳಕ್ಕೆ ಪೂರಕವಾಗಿ ಜಿ.ಎಂ.ತಾಂತ್ರಿಕ ಮಹಾ ವಿದ್ಯಾಲಯ ದಲ್ಲಿ ಜು.೨೩ರ ಶನಿವಾರ ರಾಜ್ಯಮಟ್ಟದ ೧೭ನೇ ಐಎಸ್‌ಟಿಇ ವಿದ್ಯಾರ್ಥಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಡಾ.ವೈ.ವಿಜಯ ಕುಮಾರ ತಿಳಿಸಿದರು.
ಸಮಾವೇಶದ ಅಂಗವಾಗಿ ನವೀನ ತಂತ್ರಜ್ಞಾನಗಳ ಮೂಲಕ ಸುಸ್ಥಿರ ಅಭಿವೃದ್ಧಿ ಶೀರ್ಷಿಕೆಯಡಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ಐಎಸ್‌ಟಿಇ ಸದಸ್ಯ ವಿದ್ಯಾರ್ಥಿಗಳಿಗೆ ೨೦೦ ರೂ., ಸದಸ್ಯರಲ್ಲದ ವಿದ್ಯಾರ್ಥಿಗಳಿಗೆ ೨೫೦ ರೂ.ನೋಂದಣಿ ಶುಲ್ಕವಿದೆ. ಪೇಪರ್ ಪ್ರಸಂಟೇಶನ್, ನೈಟ್ ಔಟ್ ಕೋಡಿಂಗ್, ಡಾರ್ಕ್ ಕೋಡಿಂಗ್, ಇಂಜಿನಿಯರ್ಸ್ ಐ, ಕಾರ್ಡ ಸ್ಟ್ರಕ್ಚರ್, ಇನ್ನೋವೇಟಿವ್ ಪ್ರಾಡಕ್ಟ್ ಡಿಸೈನ್, ಶಾರ್ಟ್ ಮೂವೀಸ್, ಪೋಸ್ಟರ್ ಪ್ರಸಂಟೇಶನ್ ಪ್ರಾಡಕ್ಟ್ ಮಾರ್ಕೇಟಿಂಗ್ ಸೇರಿ ವಿವಿಧ ತಾಂತ್ರಿಕ ಚಟುವಟಿಕೆಗಳು ನಡೆಯಲಿವೆ. ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಗ್ಗೆ ೯-೩೦ಕ್ಕೆ ಜಿ.ಎಂ ಹಾಲಮ್ಮ ಸಭಾಂಗಣದಲ್ಲಿ ಕಾಲೇಜು ಅಧ್ಯಕ್ಷ ಜಿ.ಎಂ. ಲಿಂಗರಾಜ್ ಉದ್ಘಾಟಿಸುವರು. ಐಎಸ್‌ಟಿಇ ರಾಷ್ಟ್ರೀಯ ಹಾಗೂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರು ಭಾಗವಹಿಸುವರು. ದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಏಜುಕೇಶನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.