

ದಾವಣಗೆರೆ: ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಡಿಡಿಪಿಐ ಪರಮೇಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶುಕ್ರವಾರ ಸೀತಮ್ಮ ಬಾಲಕಿಯರ ಹಿರಿಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡುವ ಮತ್ತು ಪ್ರೋತ್ಸಾಹ ನೀಡುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಮಹಿಳಾ ಪೊಲೀಸ್ ಠಾಣೆ ಸಿಪಿಐ ನಾಗಮ್ಮ ಮಾತನಾಡಿ, ಮುಪ್ಪಿನ ಕಾಲದಲ್ಲಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು ಪೋಷಿಸಿ ರಕ್ಷಿಸುವುದು ಇಂದು ಮುಖ್ಯವಾಗಿದೆ. ಹೆಣ್ಣು ಮಗುವಿಗೆ ಮಾನಸಿಕ ಸ್ಥೈರ್ಯ ನೀಡಿ ಅವರಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, 2011ರ ಜನಗಣತಿ ಪ್ರಕಾರ 1000 ಪುರುಷರಿಗೆ 948 ಮಹಿಳೆಯರಿದ್ದಾರೆ. ನಮ್ಮಲ್ಲಿರುವ ಲಿಂಗ ತಾರತಮ್ಯವೇ ಈ ಅಂತರಕ್ಕೆ ಕಾರಣ. ಹೆಣ್ಣು ಮಗುವೆಂದರೆ ಇಂದಿಗೂ ಮುಖ ತಿರುಗಿಸುವ ಜನರಿದ್ದಾರೆ. ಇದು ಬದಲಾಗಬೇಕು. ಇತ್ತೀಚೆಗೆ ಜಿಲ್ಲೆಯಲ್ಲಿ ಹೆಣ್ಣು ಮಗುವಿನ ಮಾರಾಟದ ಘಟನೆ ನಡೆದಿರುವುದು ಕಳಂಕ ತರುವ ಸಂಗತಿ ಎಂದು ಹೇಳಿದರು.
ಇದೇ ಸಮಯದಲ್ಲಿ ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ರಕ್ಷಿಸಿ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ. ಬಸವರಾಜ್ ಮಾತಾನಾಡಿದರು. ಸೀತಮ್ಮ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಆರ್. ಮಂಜಪ್ಪ, ಸಿಡಿಪಿಒ ಧರಣಿಕುಮಾರ್, ಮಹಿಳಾ ಠಾಣೆ ಪಿಎಸ್‌ಐ ಮಾಳಮ್ಮ, ಮಹಿಳಾ ರಕ್ಷಣಾ ಘಟಕದ ಶ್ರುತಿ ಹಾಗೂ ಸಿಬ್ಬಂದಿ ಇದ್ದರು.