ನವಜಾತ ಹೆಣ್ಣು ಶಿಶುಗಳಿಗೆ ಶುಕ್ರದೆಸೆ

1000650015.jpg
Published on

ದಾವಣಗೆರೆ: ರಾಜ್ಯಾದ್ಯಂತ ಕೆಲ ದಿನಗಳಿಂದ ಬಾಣಂತಿಯರು-ನವಜಾತ ಶಿಶುಗಳ ಮರಣದ ವಿದ್ಯಮಾನ ಎಲ್ಲೆಡೆ ಪ್ರಚಲಿತವಾಗಿತ್ತು. ಆದರೆ ಶುಕ್ರವಾರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದು ಶುಭಸುದ್ದಿಯ ಕಾರಣಕ್ಕೆ ಎಲ್ಲರ ಕಣ್ಣು ಸರ್ಕಾರಿ ಆಸ್ಪತ್ರೆಗಳತ್ತ ಹೊರಳಿತ್ತು!
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಕ್ರವಾರ ನಸುಕಿನ ಜಾವ 12 ಗಂಟೆಯಿಂದ ಸಂಜೆ 7ರ ವರೆಗೆ 14 ಹೆಣ್ಣು ಶಿಶುಗಳು ಜನಿಸಿದ್ದು, ರಾಜ್ಯ ಸರ್ಕಾರ ನೀಡಲುದ್ದೇಶಿಸಿದ ವಿಶೇಷ ಉಡುಗೊರೆಗೆ ಭಾಜನರಾಗಲಿದ್ದಾರೆ ಎಂಬ ಕಾರಣ ಎಲ್ಲರ ಚಿತ್ತ ಸೆಳೆದಿತ್ತು.
ಇಲ್ಲಿನ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ವಿಶೇಷ ಹಬ್ಬವೇ ಎಂಬಂತೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂತೆ ಆಚರಣೆ ಮಾಡಲಾಗಿದೆ. ಹೆಣ್ಣು ಶಿಶುಗಳನ್ನು ಹೆತ್ತ ತಾಯಂದಿನ್ನು ಗೌರವಿಸಲಾಗಿದೆ.
ಹೆಣ್ಣುಮಕ್ಕಳು ಎದುರಿಸುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಉದ್ದೇಶವಾಗಿದೆ. ನವಜಾತ ಹೆಣ್ಣು ಶಿಶುಗಳ ಪಾಲಕರಲ್ಲಿ ಸಂಭ್ರಮದ ಜತೆಯಲ್ಲೇ ಸರ್ಕಾರದ 1 ಸಾವಿರ ರೂ. ಮೌಲ್ಯದ ಗಿಫ್ಟ್ ಪಡೆಯುವ ಕುತೂಹಲವೂ ಹೆಚ್ಚಿದೆ.
ಬೆಂಗಳೂರಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಸಾಂಕೇತಿಕವಾಗಿ ಕಿಟ್ ನೀಡಲಾಗಿದೆ. ದಾವಣಗೆರೆ ಜಿಲ್ಲೆಗೂ ಮಡಿಲು ಕಿಟ್ ಮಾದರಿಯಲ್ಲೇ ಸಾಮಗ್ರಿಗಳನ್ನು ನೀಡುವ ನಿರೀಕ್ಷೆ ಇದೆ. ಸರ್ಕಾರ ವಿತರಣೆ ಮಾಡಿದ ಬಳಿಕ, ನಿಗದಪಡಿಸಿದ ದಿನದಂದು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
* ಗುಲಾಬಿ ಬೆಳಕಲ್ಲಿ ಮಹಿಳಾ ಆಸ್ಪತ್ರೆ!
ಮಹಿಳಾ ಸಬಲೀಕರಣದ ಭಾಗವಾಗಿ ಚುನಾವಣೆ ವೇಳೆ ಕಾಣುತ್ತಿದ್ದ ಪಿಂಕ್ ಮತಗಟ್ಟೆ ಮಾದರಿಯಲ್ಲೇ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಕೂಡ ಶುಕ್ರವಾರ ಪಿಂಕ್ ಆಸ್ಪತ್ರೆಯಾಗಿ ಕಂಗೊಳಿಸಿತ್ತು. ಗುಲಾಬಿ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರಗೊಂಡಿತ್ತು.
ಆಸ್ಪತ್ರೆ ಸಭಾಂಗಣದಲ್ಲಿ ಪುಟ್ಟ ಕಾರ್ಯಕ್ರಮವನ್ನೇ ನಡೆಸಲಾಯಿತು. ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರು ಪುರುಷರಿಗಿಂತ ಕಡಿಮೆ ಇಲ್ಲ. ಹೀಗಾಗಿ ಹೆಣ್ಣುಭ್ರೂಣ ಹತ್ಯೆ ಮಾಡಬೇಡಿ. ಅದಕ್ಕೆ ಪ್ರೋತ್ಸಾಹಿಸಲೂ ಬೇಡಿ ಎಂದು ಆಸ್ಪತ್ರೆ ವೈದ್ಯರು ಅಲ್ಲಿದ್ದ ತಾಯಂದಿರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಅಷ್ಟಕ್ಕೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಸಂಪನ್ನಗೊಳಿಸದೆ,  ಗುರುವಾರ ಬೆಳಗ್ಗೆ 10ರಿಂದಲೂ ಶುಕ್ರವಾರದ ಸಂಜೆಯವರೆಗೂ ಜನಿಸಿದ 10 ಹೆಣ್ಣುಮಕ್ಕಳ ತಾಯಂದಿರನ್ನು ಗುಲಾಬಿ ಹೂವು, ಸ್ವೀಟ್ ಬಾಕ್ಸ್, ಹಣ್ಣುಗಳನ್ನು ನೀಡಿ ಗೌರವಿಸಲಾಯಿತು. ತಾಯಂದಿರ ಜತೆಗೆ ನವಜಾತ ಹೆಣ್ಣು ಶಿಶುಗಳು ಕೂಡ ಚೊಚ್ಚಲ ವೇದಿಕೆ ಹಂಚಿಕೊಂಡಿದ್ದವು!
ಇದೇ ವೇಳೆ ಶನಿವಾರ ಮತದಾರರ ದಿನ. ಇದರ ಅಂಗವಾಗಿಯೂ ಅಲ್ಲಿದ್ದ ತಾಯಂದಿರು, ಮಹಿಳಾ ಸಿಬ್ಬಂದಿಗೂ ಕೂಡ ತಪ್ಪದೇ ಮತದಾನ ಮಾಡುವ ಬಗ್ಗೆ ಪ್ರತಿಜ್ಞೆ ಬೋಧಿಸುವುದರೊಂದಿಗೆ ಆಸ್ಪತ್ರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರುದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಅಧೀಕ್ಷಕ ಡಾ. ಎಸ್.ಪಿ.ಮಧು, ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಭಾರತಿ, ಮಕ್ಕಳ ತಜ್ಞೆ ಡಾ. ಸುಧಾ ಇತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಶುಕ್ರವಾರ ಸಂಜೆ ಏಳರವರೆಗೆ ದಾವಣಗೆರೆಯ ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 5, ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಹರಿಹರದ ತಾಲೂಕು ಆಸ್ಪತ್ರೆಯಲ್ಲಿ ತಲಾ 3, ಚನ್ನಗಿರಿ, ಜಗಳೂರು ತಾಲೂಕು ಆಸ್ಪತ್ರೆ ಹಾಗೂ ಮಲೇಬೆನ್ನೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ ಒಂದು ಶಿಶು ಜನಿಸಿವೆ.

ಡಾ. ಷಣ್ಮುಖಪ್ಪ,

ಜಿಲ್ಲಾ ಆರೋಗ್ಯಾಧಿಕಾರಿ.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net