

ದಾವಣಗೆರೆ: ಆದಿಪೂಜಿತ ವಿನಾಯಕನ ಉತ್ಸವಕ್ಕೆ ದಾವಣಗೆರೆ ಜಿಲ್ಲೆ ಕಳೆಗಟ್ಟಿದೆ. ನಾನಾ ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ನಾನಾ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ವೃತ್ತ, ರಸ್ತೆ, ಗಲ್ಲಿ-ಗಲ್ಲಿಗಳಲ್ಲೂ ಶಾಮಿಯಾನಗಳು, ಭಗವಾಧ್ವಜ, ಕೇಸರಿ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.
ಜಿಲ್ಲೆಯ 2098 ಕಡೆಗಳಲ್ಲಿ ಸಾರ್ವಜನಿಕ ಮೂರ್ತಿಗಳನ್ನು ಕೂರಿಸಲಾಗಿದೆ. ದಾವಣಗೆರೆ ನಗರ ಒಂದರಲ್ಲೇ 568 ಸಂಘಟನೆಗಳು ಗಜಾನನನನ್ನು ಪ್ರತಿಷ್ಠಾಪಿಸಿವೆ. ಆಗಾಗ್ಗೆ ಸುರಿವ ಮಳೆಯ ನಡುವೆಯೂ ಸ್ಪರ್ಧೆಗೆ ಒಡ್ಡಿದವರಂತೆ ಯುವಕ ಮಂಡಳಿಗಳು ರೂಪಕ ಇತರೆ ರಸಮಂಜರಿ ಕಾರ್ಯಕ್ರಮಗಳ ಪ್ರದರ್ಶನ ನೀಡುತ್ತಿದ್ದು, ಯುವಕರಲ್ಲಿ ಹಬ್ಬದ ಜೋಷ್ ಇಮ್ಮಡಿಯಾಗಿದೆ.
ಮನೆ-ಮನೆಗಳಲ್ಲೂ ಬೆನಕನನ್ನು ಕೂರಿಸಿದ ಭಕ್ತರು ಉಪಾಸನೆ ಮಾಡುತ್ತಿದ್ದಾರೆ. ವಿದ್ಯುದಲಂಕಾರದೊಂದಿಗೆ ಕಂಗೊಳಿಸುತ್ತಿರುವ ಗಣೇಶನ ದೇಗುಲಗಳಲ್ಲೂ ವಿಶೇಷಾರಾಧನೆ ಜರುಗುತ್ತಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರಪಾಲಿಕೆಯಿಂದ ಆಯ್ದ ಸ್ಥಳಗಳಲ್ಲಿ ಟ್ರಾೃಕ್ಟರ್ ನಿಲುಗಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ತಪ್ಪಿಸುವತ್ತ ಬೆಸ್ಕಾಂ ಸಿಬ್ಬಂದಿ ಎಚ್ಚರ ವಹಿಸುತ್ತಿದ್ದಾರೆ. ಜಿಲ್ಲೆಯ 12 ಸೂಕ್ಷ್ಮ, 146 ಅತಿ ಸೂಕ್ಷ್ಮ ಪ್ರದೇಶದ ಗಣೇಶ ಮೂರ್ತಿಗಳತ್ತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ಆಕರ್ಷಣೆ
ದಾವಣಗೆರೆಯ ಹೈಸ್ಕೂಲ್ ಮೈದಾನ ಈ ಬಾರಿಯೂ ಗಮನ ಸೆಳೆಯುತ್ತಿದೆ. ಕಾಶಿ ವಿಶ್ವನಾಥನ ದೇಗುಲ ಮಾದರಿಯ ಮಹಾಮಂಟಪದ ಕಾರಣಕ್ಕಾಗಿ. ಸಾರ್ವಜನಿಕ ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ಏಳನೇ ವರ್ಷದ ಅಂಗವಾಗಿ 100 ಅಡಿ ಉದ್ದ, 200 ಅಡಿ ಅಗಲ ಹಾಗೂ 20 ಅಡಿ ಎತ್ತರ ವಿಸ್ತೀರ್ಣದ ಈ ಭವ್ಯ ಮಂಟಪಕ್ಕೆ ಅಂತಿಮ ಹಂತದ ಟಚಪ್ ನಡೆಯುತ್ತಿದೆ.
ಕೊಲ್ಕತ್ತಾದ 25 ಮಂದಿ ಕಾರ್ಮಿಕರು ಈ ಮಂಟಪ ನಿರ್ಮಿಸಿದ್ದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಮಂಟಪದ ಒಳಗೆ 16 ಅಡಿ ಎತ್ತರದ ಶಿವನ ಅವತಾರದ ಗಣೇಶನ ಮೂರ್ತಿ ವಿರಾಜಮಾನವಾಗಿದೆ. ನಿತ್ಯ ಸಂಜೆ ಭಗೀರಥ ಮಹರ್ಷಿಯ ರೂಪಕ ಪ್ರದರ್ಶನ ನಡೆಯಲಿದೆ. ಅ.5ರಂದು ಗಣೇಶ ವಿಸರ್ಜನೆ ನಡೆಯಲಿದೆ ಎಂದು ಆಯೋಜಕ ಗುರು ಜೊಳ್ಳಿ ತಿಳಿಸಿದರು.
* ಒಣದ್ರಾಕ್ಷಿಯಿಂದ ತಯಾರಾದ ವಿನಾಯಕ
ಹಿಂದು ಯುವಶಕ್ತಿ ಸಂಘ 33ನೇ ವರ್ಷದ ಆಚರಣೆ ಭಾಗವಾಗಿ ತೊಗಟವೀರ ಸಮುದಾಯ ಭವನದಲ್ಲಿ 51 ಕೆಜಿ ಒಣದ್ರಾಕ್ಷಿಗಳಿಂದ ನಿರ್ಮಿಸಿದ ಗಣೇಶ, ಜನರಿಗೆ ದರ್ಶನ ನೀಡುತ್ತಿದ್ದಾನೆ. ಕೊಲ್ಕತಾ ಕಲಾವಿದ ಸಂಜಿತ್ ಪಾಲ್ ನೇತೃತ್ವದಲ್ಲಿ ಸ್ಥಳೀಯ 12 ಮಂದಿ ಕಲಾವಿದರು ಮೂರ್ತಿಗೆ ರೂಪ ನೀಡಿದ್ದಾರೆ.
16 ಅಡಿ ಎತ್ತರ, 8 ಅಡಿ ಅಗಲ ವಿಸ್ತೀರ್ಣದ ಮೂರ್ತಿ ಇದಾಗಿದೆ. ಒಣದ್ರಾಕ್ಷಿ, ಮೂರ್ತಿ ಸಿದ್ಧತೆಗೆ ಸುಮಾರು 50 ಸಾವಿರ ರೂ.ಗೂ ಹೆಚ್ಚು ವೆಚ್ಚವಾಗಿದೆ. ಸೆ. 17ರಂದು ಜಾನಪದ ಕಲಾತಂಡಗಳ ಮೆರುಗಿನೊಂದಿಗೆ ಗಣೇಶನ ವಿಸರ್ಜನೆ ನಡೆಯಲಿದೆ ಎಂದು ಸಂಚಾಲಕ ಪಿ.ಸಿ. ಶ್ರೀನಿವಾಸ್ ತಿಳಿಸಿದರು.
ಮೂಷಿಕ ವಾಹನ ರೂಪಕ
ವಿನೋಬನಗರದ ಎರಡನೇ ಮುಖ್ಯರಸ್ತೆಯ ಶ್ರೀ ವೀರವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ರೇಣುಕ ಯಲ್ಲಮ್ಮ ದೇವಿಯ ಕೆಳಗೆ ಗಣೇಶ ಪ್ರತಿಷ್ಠಾಪನೆಯಾಗಿದ್ದಾನೆ. ಮೂಷಿಕ ವಾಹನದ ವಿಶೇಷ ರೂಪಕ ನಿತ್ಯ ಸಂಜೆ ಪ್ರದರ್ಶನ ಕಾಣಲಿದೆ. ಸೆ. 15ರಂದು ವಿಶೇಷ ಮೆರವಣಿಗೆ ಮೂಲಕ ಬಾತಿ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.
* ರಾಂ ಆ್ಯಂಡ್ ಕೋ ಸಿದ್ಧಿವಿನಾಯಕ
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ವರಸಿದ್ಧಿ ವಿನಾಯಕ ಸೇವಾ ಸಮಿತಿ, ರಾಮ್ ಆ್ಯಂಡ್ ಕೋ ಗೆಳೆಯರ ಬಳಗದ ಸಹಯೋಗದಲ್ಲಿ 32ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಬೆಳಗಾವಿಯಿಂದ ತರಿಸಲಾದ ಏಳು ಅಡಿ ಎತ್ತರದ ಗಣೇಶನ ಜತೆಗೆ ನಿತ್ಯ ಸಂಜೆ 7ರಿಂದ ಪಾಂಡುರಂಗ ವಿಠ್ಠಲನ ರೂಪಕ ಪ್ರದರ್ಶಿತವಾಗಲಿದೆ. ಸೆ. 17ರಂದು ಗಣೇಶ ವಿಸರ್ಜನೆಯಾಗಲಿದೆ ಎಂದು ಅಧ್ಯಕ್ಷ ನಾಗೇಂದ್ರ ರೆಡ್ಡಿ ತಿಳಿಸಿದರು.
ವಾಸವಿ ಸಂಘದಿಂದ ಲೇಸರ್ ಪ್ರದರ್ಶನ
ಎಸ್‌ಕೆಪಿ ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ 43ನೇ ವರ್ಷದ ಗಣೇಶೋತ್ಸವ ನಡೆಯಲಿದೆ. ಕಾಸಲ್ ವಿಠ್ಠಲ್ ಸುನಂದಮ್ಮ ಕಲ್ಯಾಣಮಂಟಪದಲ್ಲಿ ಶಿವ-ಪಾರ್ವತಿ ಕಲ್ಯಾಣ ಕುರಿತಾದ ಲೇಸರ್ ಪ್ರದರ್ಶನ ನಿತ್ಯ ಸಂಜೆ 6ರಿಂದ ನಡೆಯಲಿದೆ. ಬೆಂಗಳೂರಿನ ಕ್ರಿಯೇಟಿವ್ ಲೇಸರ್ ಶೋ ತಂಡದ ಅಭಿಷೇಕ್ ತಂಡದವರು ಇದನ್ನು ನಡೆಸಿಕೊಡಲಿದ್ದಾರೆ. ಸೆ. 15ರಂದು ಮೂರ್ತಿ ವಿಸರ್ಜನೆ ಆಯೋಜನೆಯಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ಸುನಿಲ್ ತಿಳಿಸಿದರು.
ಸರ್ಕಾರಿ ಶಾಲೆ ದಾಖಲಾತಿಗೆ ಉತ್ತೇಜಿಸಿದ ಮಂಟಪ!
ಎಂಸಿಸಿ ಎ ಬ್ಲಾಕ್‌ನ ಸೂಪರ್ ಮಾರ್ಕೆಟ್‌ನಲ್ಲಿ ಸರ್ಕಾರಿ ಹಿ.ಪ್ರಾ. ಶಾಲೆಗಳ ದಾಖಲಾತಿಗೆ ಉತ್ತೇಜಿಸುವ ವಿಶೇಷ ಮಂಟಪ ಗಮನ ಸೆಳೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಅನುಕೂಲತೆಗಳ ಬಗ್ಗೆ ಇಲ್ಲಿ ಫಲಕಗಳ ಫ್ಲೆಕ್ಸ್ ಇಲ್ಲಿ ಕಣ್ಣಿಗೆ ರಾಚಲಿದೆ. ಹಿಂದು ಸೈ ಯುವ ವೇದಿಕೆ ಸಂಘಟನೆ ಆಯೋಜಿಸಿದ ಗಣೇಶೋತ್ಸವದ ಮಾದರಿ ಇದು. ಕೈಯಲ್ಲಿ ಪುಸ್ತಕ ಹಿಡಿದ ವಿನಾಯಕನ ಮಾದರಿ ಮೂರ್ತಿ ಇಲ್ಲಿದೆ.
ಕೋದಂಡರಾಮ ದೇಗುಲದಲ್ಲಿ ರೂಪಕ
ಮಂಡಿಪೇಟೆಯ ಕೋದಂಡರಾಮ ದೇಗುಲದಲ್ಲಿ ಸ್ವಸ್ತಿಕ್ ಗ್ರೂಪ್ ಆಯೋಜಿಸಿರುವ 51ನೇ ವರ್ಷದ ಗಣೇಶೋತ್ಸವದಲ್ಲಿ ಈ ಬಾರಿ ನಿತ್ಯ ಸಂಜೆ 6ರಿಂದ ‘ಶ್ರೀರಾಮನ ಧರ್ಮ- ಸುಗ್ರೀವ ವಿಜಯ’ ಶೀರ್ಷಿಕೆಯ 20 ನಿಮಿಷ ಅವಧಿಯ ವಿಶೇಷ ರೂಪಕ ಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಪವನ್ ಮತ್ತು ತಂಡದವರು ಪ್ರದರ್ಶನ ನಡೆಸಿಕೊಡುವರು. ಸೆ. 17ರಂದು ಮೂರ್ತಿ ವಿಸರ್ಜನೆ ನಡೆಯಲಿದೆ.
ಬಸವರಾಜ ಪೇಟೆಯಲ್ಲಿ ಆ್ಯನಿಮೇಷನ್
ಬಸವರಾಜ ಪೇಟೆಯ 2ನೇ ಕ್ರಾಸ್‌ನಲ್ಲಿ ವಿನಾಯಕ ಯುವಕರ ಸಂಘದಿಂದ ಆಯೋಜಿಸಲಾದ ಉತ್ಸವದಲ್ಲಿ ಆಂಜನೇಯನ ಮೇಲೆ ಶ್ರೀರಾಮನ ಅವತಾರದಲ್ಲಿ ನಿಂತಿರುವ ಗಣೇಶನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಶ್ರೀರಾಮನ ವನವಾಸ ಕುರಿತಾದ ಆ್ಯನಿಮೇಷನ್ ವಿಡಿಯೋ ನಿತ್ಯ ಸಂಜೆ 6 ಗಂಟೆಯಿಂದ 15 ನಿಮಿಷ ಅವಧಿಗೊಮ್ಮೆ ಪ್ರದರ್ಶಿತವಾಗಲಿದೆ.
ಗುಹೆಯಲ್ಲಿ 18 ಅಡಿ ಎತ್ತರದ ಗಜರಾಜ!
ನಗರದೇವತೆ ದುಗ್ಗಮ್ಮ ದೇವಸ್ಥಾನ ಸಮೀಪದ ತಳವಾರ ಕೇರಿಯಲ್ಲಿ ವಾಲ್ಮೀಕಿ ಯುವಕರ ಸಂಘವು 33 ವರ್ಷದ ಆಚರಣೆ ಹಿನ್ನೆಲೆಯಲ್ಲಿ ಗುಹೆ ರೂಪ ನಿರ್ಮಿಸಿದ್ದು ಅದರೊಳಗೆ 18 ಅಡಿ ಎತ್ತರದ ಗಜರಾಜನನ್ನು ಕೂರಿಸಲಾಗಿದೆ. ದಾವಣಗೆರೆಯಲ್ಲೇ ಇದು ಅತಿ ಎತ್ತರದ ಮೂರ್ತಿ ಆಗಿದ್ದು, ಬೆಳಗಾವಿಯಿಂದ ತರಿಸಲಾಗಿದೆ. ಸೆ. 29ರಂದು ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಆಯೋಜಕ ಹನುಮಂತು ತಿಳಿಸಿದರು.
ಚತುರ್ಮುಖನಿಗೆ ನಾನಾ ರೂಪ
ಉಳಿದಂತೆ ನಗರದ ವಿವಿಧೆಡೆ ಮೂರ್ತಿಗಳು ಗಮನ ಸೆಳೆಯುತ್ತಿವೆ. ಶಿವಾಜಿ ನಗರದಲ್ಲಿ ವರಾಹ ಜತೆಯಲ್ಲಿ ನಿಂತ ಭಂಗಿಯಲ್ಲಿರುವ 13. 5 ಅಡಿ ಎತ್ತರದ ಇಮ್ಮಡಿ ಪುಲಕೇಶಿ ಮೂರ್ತಿ ಆಕರ್ಷಿಸುತ್ತಿದೆ. ಬಜರಂಗಬಲಿ ಯುವಕರ ಸಂಘ ಈ ಮೂರ್ತಿ ಪ್ರತಿಷ್ಠಾಪಿಸಿದೆ. ಗಾಂಧಿನಗರದಲ್ಲಿ ಶ್ರೀ ವಿನಾಯಕ ಯೂತ್ಸ್ ಸಮಿತಿಯಿಂದ ರಾಮನ ಜತೆಯಲ್ಲಿರುವ ಗಣೇಶನನ್ನು ಕೂರಿಸಲಾಗಿದೆ.
ಹಳೇ ಬೇತೂರು ರಸ್ತೆಯಲ್ಲಿ ಡಿ ಟೌನ್ ಬಾಯ್ಸ ತಂಡದಿಂದ ಬಾಲಗೋಪಾಲ ಮಾದರಿಯಲ್ಲಿ ಗಣೇಶನಿದ್ದಾನೆ. ವಿದ್ಯಾನಗರದಲ್ಲಿ ಶ್ರೀರಾಮ್ ಯುವ ಸೇನೆಯಿಂದ ಗಣೇಶನ ಹೆಗಲ ಮೇಲೆ ಕೂರಿಸಿಕೊಂಡ ಶ್ರೀರಾಮ- ಲಕ್ಷ್ಮಣರುಳ್ಳ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಸ್ವಾಗೇರಪೇಟೆಯಲ್ಲಿ ಬನ್ನಿ ಮಹಾಂಕಾಳಮ್ಮ ಯುವಕರ ಸಂಘದಡಿ ಕೂರಿಸಲಾದ ಅಯೋಧ್ಯಾ ಬಾಲರಾಮ ಗಮನ ಸೆಳೆಯಲಿದೆ.
ಭಗತ್‌ಸಿಂಗ್ ನಗರದಲ್ಲಿ ಗುರುದ್ರೋಣ ಕ್ರೀಡಾ ಸಮಿತಿ, ವಿನಾಯಕ ಗೆಳೆಯರ ಬಳಗದಿಂದ ಗಣೇಶೋತ್ಸವದ ಹೊರಾವರಣದಲ್ಲಿ ಭಾವಚಿತ್ರ ಸಹಿತ ಪದ್ಮಶ್ರೀ ಪುರಸ್ಕೃತರ ಸವಿವರದ ಫ್ಲೆಕ್ಸ್ ಓದಿಗೆ ಹಚ್ಚಲಿದೆ. ಎಂಸಿಸಿ ಎ ಬ್ಲಾಕ್‌ನ ಹಿಂದು ಯುವ ಸೇನೆಯಿಂದ ಪುರಿ ಜಗನ್ನಾಥನ ಹಿನ್ನೆಲೆಯಲ್ಲಿನ ಗಣನಾಯಕನನ್ನು ಪ್ರತಿಷ್ಠಾಪಿಸಲಾಗಿದೆ. ಸಿದ್ದಗಂಗಾ ಶಾಲೆಯಲ್ಲಿ ಶಿಕ್ಷಕರು-ವಿದ್ಯಾರ್ಥಿಗಳೇ ನಿರ್ಮಿಸಿದ 12 ಅಡಿ ಎತ್ತರದ ಪೇಪರ್ ಗಣಪ ಗಮನ ಸೆಳೆಯುತ್ತಿದ್ದು ಇದಕ್ಕೆ ಕಾಗದ, ಮೈದಾ ಅಂಟು, ಇದ್ದಿಲು ಪುಡಿ ಬಳಸಲಾಗಿದೆ.
ದಾವಣಗೆರೆ ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ 200ಕೆಜಿಗೂ ಹೆಚ್ಚಿನ ಕೊಬ್ಬರಿ ಗಿಟುಕುಗಳಿಂದ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಸೆ. 11ರ ವರೆಗೆ ಅವಕಾಶವಿದೆ.