ನಿರ್ವಹಣೆಯಾಗದ ಶುದ್ಧ ನೀರಿನ ಘಟಕ    ಶಾಸಕ ಬಸವಂತಪ್ಪ ಅಧಿಕಾರಿಗಳಿಗೆ ತರಾಟೆ

1000159259.jpg
Published on

ದಾವಣಗೆರೆ: ದಿಂಡದಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಮೂರು ತಿಂಗಳು ಕಳೆದರೂ ಗ್ರಾಮಸ್ಥರಿಗೆ ಒಂದು ಹನಿ ನೀರು ವಿತರಿಸಲಾಗಿಲ್ಲ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದಿಂಡದಹಳ್ಳಿ ಗ್ರಾಮಕ್ಕೆ ಶಾಸಕರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶುದ್ಧ ನೀರು ಸಿಗದೆ ವಿವಿಧ ರೋಗಕ್ಕೆ ತುತ್ತಾಗಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದರ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿದ್ದರೂ ಗ್ರಾಮಸ್ಥರಿಗೆ ನೀರು ವಿತರಿಸಲು ಆಗಿಲ್ಲ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ಅನೇಕ ಘಟಕಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಕೂಡಲೆ ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ವಿತರಿಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಲಾಗಿದೆ. ಹೀಗಿದ್ದರೂ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು. ಇದಕ್ಕೆ ಸಿಇಒ ಸಮ್ಮತಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ:  
ನಂತರ ಮಾಯಕೊಂಡ ಗ್ರಾಮದ ಕೆಪಿಎಸ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸಭೆ ನಡೆಸಿದ ಶಾಸಕರು, ಶಾಲಾ ಕಾಲೇಜು ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿರುವುದಕ್ಕೆ  ಶಿಕ್ಷಕರನ್ನು ತರಾಟೆ ತೆಗೆದುಕೊಂಡರು.
ಮುಂದಿನ ಬಾರಿ ಶಾಲೆಗೆ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶ್ರಮಿಸಬೇಕು. ಬಳಿಕ ಶಾಲಾ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಪ್ರಾಚಾರ್ಯ ಡಿ.ಬಸವರಾಜ್, ಉಪ ಪಾಚಾರ್ಯರು, ಸಹ ಶಿಕ್ಷಕರು ಹಾಗೂ ಎಲ್ಲಾ ಶಾಲಾ ಸಿಬ್ಬಂದಿ, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಮುಖಂಡ ಮೆಡಿಕಲ್ ರುದ್ರೇಶಣ್ಣ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net