

ದಾವಣಗೆರೆ: ಮ್ಯಾಟ್ರಿಮೊನಿ ಮೂಲಕ ಯುವತಿಯರನ್ನು ವಂಚಿಸುತ್ತಿದ್ದ ಹಾಗೂ ನೌಕರಿ ಕೊಡಿಸುವ ಆಮಿಷವೊಡ್ಡಿ ಹಣ ಸುಲಿಗೆ ಮಾಡುತ್ತಿದ್ದ ಮಂಡ್ಯ ಮೂಲದ ಅಂತರ್‌ಜಿಲ್ಲಾ ಆರೋಪಿಯನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಆರೋಪಿ ಮಾಧು ಆಲಿಯಾಸ್ ಎಂ. ಮಧು ಬಂಧಿತ ಆರೋಪಿಯಾಗಿದ್ದು ಆತನಿಂದ ಮೊಬೈಲ್ ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ. ಆರೋಪಿ, ಐದು ಜಿಲ್ಲೆಗಳ ವ್ಯಾಪ್ತಿಯ ಒಟ್ಟು ಎಂಟು ಪ್ರಕರಣಗಳಲ್ಲಿ 62.83 ಲಕ್ಷ ರೂ.ಗಳ ವಂಚನೆ ನಡೆಸಿದ್ದ.
ಮ್ಯಾಟ್ರಿಮೊನಿ ವಿಚಾರವಾಗಿ ಚಿಕ್ಕಮಗಳೂರು ಠಾಣೆಯ 3.80 ಲಕ್ಷ ರೂ., ಮಂಡ್ಯ ಸಿಇಎನ್ ಠಾಣೆಯ 26 ಲಕ್ಷ ರೂ. ಹಾಗೂ ದಾವಣಗೆರೆ ಸಿಇಎನ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ 21.03 ಲಕ್ಷ ರೂ. ವಂಚನೆ ನಡೆಸಿದ್ದ.
ಐದು ಪ್ರಕರಣ ನೌಕರಿ ಕೊಡಿಸುವ ಆಮಿಷಕ್ಕೆ ಸಂಬಂಧಿಸಿವೆ. ದಾವಣಗೆರೆ ಬಡಾವಣೆ ಠಾಣೆಯ 1.5 ಲಕ್ಷ ರೂ. ಹರಿಹರ ನಗರ ಠಾಣೆಯ 1.30 ಲಕ್ಷ ರೂ., ಬೆಂಗಳೂರು ಕಾಟನ್‌ಪೇಟೆ ಠಾಣೆಯ 2.80 ಲಕ್ಷ ರೂ., ಮೈಸೂರು ಸಿಇಎನ್ ಠಾಣೆಯ 90 ಸಾವಿರ ರೂ. ಹಾಗೂ ಕೆಆರ್ ನಗರ ಠಾಣೆ ವ್ಯಾಪ್ತಿಯ 5.50 ಲಕ್ಷ ರೂ.ಗಳನ್ನು ಲಪಟಾಯಿಸಿದ್ದ.
ಮೇ 4ರಂದು ಕನ್ನಡ ಮ್ಯಾಟ್ರಿಮೊನಿ ಆ್ಯಪ್ ನೋಡುತ್ತಿದ್ದ ಯುವತಿಯೊಬ್ಬರಿಗೆ ಪರಿಚಯವಾದ ಆರೋಪಿ ‘ನಿಮ್ಮ ಪ್ರೊಫೈಲ್ ಇಷ್ಟವಾಗಿದ್ದು ಮದುವೆಯಾಗಲು ಒಪ್ಪಿದ್ದೇನೆ’ ಎಂದು ವಾಟ್ಸಾೃಪ್ ಮೂಲಕ ಮೆಸೇಜ್ ಮಾಡಿದ್ದಾನೆ. ನಂತರದಲ್ಲಿ ಯುವತಿಯ ನಂಬರ್‌ಗೆ ಕರೆ ಮಾಡುತ್ತ, ವಾಟ್ಸಾೃಪ್ ಮಾಡುವುದನ್ನು ಮುಂದುವರಿಸಿ ಯುವತಿಯ ವಿದ್ಯಾಭ್ಯಾಸದ ಮಾಹಿತಿ ಪಡೆದಿದ್ದಾನೆ.
ನಾನು ರೈಲ್ವೆ ಇಲಾಖೆಯ ವರ್ಕ್‌ಶಾಪ್‌ನಲ್ಲಿ ಇಂಜಿನಿಯರ್ ಆಗಿದ್ದು, ಮೈಸೂರು ನಗರದ ಆರ್‌ಆರ್‌ಬಿ ರೈಲ್ವೆ ಇಲಾಖೆಯಲ್ಲಿ ಗುಮಾಸ್ತ ಹುದ್ದೆಗಳು ಖಾಲಿ ಇದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು 21,03,600 ರೂ.ಗಳನ್ನು ಆನ್‌ಲೈನ್ ಮೂಲಕ ಪಡೆದು ವಂಚಿಸಿದ್ದ. ಜೂ. 25ರಂದು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಬಳಿಕ 4,01,463 ರೂ. ಗಳನ್ನು ಯುವತಿಗೆ ಮರುಪಾವತಿ ಮಾಡಿಸಲಾಗಿದೆ.
ಎಎಸ್ಪಿ ವಿಜಯಕುಮಾರ ಎಂ. ಸಂತೋಷ ಹಾಗೂ ಸಿಇಎನ್ ಠಾಣೆಯ ಡಿವೈಎಸ್ಪಿಗಳಾದ ಜಿ.ಮಂಜುನಾಥ, ಪದ್ಮಶ್ರೀ ಗುಂಜೀಕ್ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಪಿಐ ಲಕ್ಷ್ಮಣನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ಮೂಲಕ ಹಾಗೂ ನೌಕರಿ ಕೊಡಿಸುವ ನೆಪದಲ್ಲಿ ನಯವಾಗಿ ಮಾತನಾಡಿ ವಂಚನೆ ಮಾಡುವವರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಇಂತಹ ಘಟನೆಗಳು ಕಂಡುಬಂದರೆ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.