

ದಾವಣಗೆರೆ: ಖಾಲಿ ಚೆಕ್ ನೀಡಿ ಪಡೆದ ಸಾಲ ತೀರಿಸಿದ್ದರೂ, ಖಾತೆಗೆ ಹಾಕಿದ್ದ 5.05 ಲಕ್ಷ ರೂ. ಹಿಂತಿರುಗಿಸಿದ್ದರೂ ಚಿರಡೋಣಿ ಗ್ರಾಮದ ಕೆ.ಹಂಸತಾರಕಂ ಅವರು ನನ್ನ ವಿರುದ್ಧ ಸುಳ್ಳು ನೋಟಿಸ್ ಕೊಡಿಸಿ ವಂಚನೆ ಮಾಡಿದ್ದಾರೆ ಎಂದು ಅದೇ ಗ್ರಾಮದ ರೈತ ಎಸ್.ಬಿ. ಅಶೋಕ್ ದೂರಿದರು.
2018ರಲ್ಲಿ ವಿವಾಹ ಸಂಬಂಧ ಪಡೆದಿದ್ದ 1 ಲಕ್ಷ ರೂ.ವನ್ನು ನಾಲ್ಕು ಬೆಳೆಯ ಭತ್ತ ಮಾರಾಟ ಮಾಡಿ ಸಾಲ ತೀರುವಳಿ ಮಾಡಿದ್ದೇನೆ. ಆಗ ಬಾಬ್ತು ಭದ್ರತೆಗಾಗಿ ನೀಡಿದ್ದ ಚೆಕ್ ವಾಪಾಸ್ ನೀಡಿರಲಿಲ್ಲ. ಈಗ ಅದನ್ನು ಬ್ಯಾಂಕ್‌ಗೆ ಹಾಜರುಪಡಿಸಿ ಹಿಂಬರಹ ಪಡೆದು, ಅಂಚೆ ಮೂಲಕ ಹಿಂದಿನ ಚೆಕ್ ಆಧಾರದಡಿ ನನಗೆ 5.05 ಲಕ್ಷ ರೂ. ನೀಡದಿದ್ದರೆ ಕ್ರಿಮಿನಲ್ ದಾವೆ ಹೂಡುವುದಾಗಿ ನೋಟಿಸ್ ಕೊಟ್ಟಿದ್ದಾರೆ. ಕೂಲಿ ಮಾಡಿ ಬದುಕುವ ನನಗೆ ದಿಕ್ಕೇ ತೋಚದಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡರು.
ನನ್ನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದ್ದು, ಆಗ ಎಲ್ಲ ಖಾಲಿ ಚೆಕ್‌ಗಳನ್ನು, ಪ್ರಾಂಸರಿ ನೋಟ್‌ಗಳನ್ನು ನನ್ನ ಮಗ ಸುಟ್ಟು ಹಾಕಿದ್ದಾನೆ ಎಂದು ಹಂಸತಾರಕಂ ಹೇಳಿದ್ದರು. ದಾಳಿ ಹಿನ್ನೆಲೆಯಲ್ಲಿ ನನ್ನ ಬ್ಯಾಂಕ್ ಖಾತೆ ಲಾಕ್ ಆಗಿದೆ. 5.05 ಲಕ್ಷ ರೂ.ವನ್ನು ನಿನ್ನ ಖಾತೆಗೆ ಹಾಕಲಿದ್ದು, ಅದನ್ನು ನೀಡುವಂತೆ ಕೇಳಿದ್ದರು.
ಅದರಂತೆ 2022ರ ಜ.22ರಿಂದ ಜು. 14ರವರೆಗೆ ವಿವಿಧ ಹಂತದಲ್ಲಿ ಹಾಕಿದ್ದ ಹಣವನ್ನು ಬಿಡಿಸಿಕೊಟ್ಟಿದ್ದರೂ ನೀಡಿಲ್ಲ ಎಂದು ಹೇಳಿ ಮೋಸ ಮಾಡಿದ್ದಲ್ಲದೆ ಈ ಹಣ ಕಟ್ಟುವಂತೆ ಹೆದರಿಸಿ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಠಾಣೆಗೆ ದೂರು ನೀಡಿದ್ದೇನೆ. ಕೂಡಲೆ ಹಂಸತಾರಕಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ನಿ ಕಾವ್ಯಾ ಮಾತನಾಡಿ ನನ್ನ ಪತಿಗೆ ಹೈದಯ ಸಂಬಂಧಿ ಕಾಯಿಲೆ ಇದೆ. ಇದು ಗೊತ್ತಿದ್ದೂ ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಅವರಿಗೆ ಏನಾದರೂ ತೊಂದರೆಯಾದಲ್ಲಿ ಹಂಸತಾರಕಂ ಅವರೇ ಹೊಣೆ ಎಂದು ಹೇಳಿದರು.
ಗ್ರಾಮಸ್ಥ ಬೀರಪ್ಪ ಎಂಬುವರು ಮಾತನಾಡಿ ಹಂಸತಾರಕಂ ಅವರ ಬಳಿ ಸಾಲ ಪಡೆದು ತೀರಿಸಿದ್ದೇನೆ. ಆದರೂ ಸಾಲದ ಪತ್ರ ನೀಡುತ್ತಿಲ್ಲ. ಇತ್ತೀಚೆಗೆ ಸಾಲದ ಪತ್ರ ಕಳ್ಳತನ ಮಾಡುವ ಪ್ರಯತ್ನ ನಡೆದಿದೆ ಎಂದು ನನ್ನ ವಿರುದ್ಧವೇ ಸುಳ್ಳು ದೂರು ನೀಡಿದ್ದರು. ಡಿಸೆಂಬರ್ ಒಳಗೆ ಹಣ ನೀಡುವಂತೆ ಖಾಲಿ ಪತ್ರಕ್ಕೆ ಸಹಿ ಪಡೆದಿದ್ದಾರೆ. ಗ್ರಾಮದಲ್ಲಿ ಅನೇಕರು ಅವರಿಂದ ಮೋಸ ಹೋಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ್, ಮಂಜುಳಮ್ಮ ಇದ್ದರು.