

ದಾವಣಗೆರೆ: ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ದಾವಣಗೆರೆ ಜಿಲ್ಲೆಗೆ ನಾಲ್ಕು ಪ್ರಶಸ್ತಿ ಸಂದಿವೆ.
ಅತ್ಯುತ್ತಮ ಸಾಧನೆಗಾಗಿ ದಾವಣಗೆರೆ ಜಿಲ್ಲಾ ಪಂಚಾಯಿತಿಯು ಅತ್ಯುತ್ತಮ ಜಿಪಂ ಪುರಸ್ಕಾರಕ್ಕೆ ಭಾಜನವಾಗಿದೆ. ದಾವಣಗೆರೆ ತಾಲೂಕು ಪಂಚಾಯ್ತಿ ಕೂಡ ಅತ್ಯುತ್ತಮ ತಾಪಂ ಪುರಸ್ಕಾರಕ್ಕೆ ಪಾತ್ರವಾಗಿದೆ.
ಅತ್ಯುತ್ತಮ ಒಗ್ಗೂಡಿಸುವಿಕೆಯ ಜಿಲ್ಲಾ ಪುರಸ್ಕಾರ ಕೂಡ ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಇಲಾಖೆಗೆ ಸಂದಾಯವಾಗಿದ್ದರೆ, ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಪಂಗೆ ಅತ್ಯುತ್ತಮ ಗ್ರಾಪಂ ಪುರಸ್ಕಾರ ಸಂದಿದೆ.
ಮಾನವ ದಿನಗಳ ಸೃಜನೆ, ನೊಂದಾಯಿತ ಕೂಲಿಕಾರರಿಗೆ ಕೆಲಸ ನೀಡುವಿಕೆ, ಕಾಮಗಾರಿಗಳ ಸೃಜನೆ, ಜಲಸಂರಕ್ಷಣೆ, ನೈಸರ್ಗಿಕ ಸಂಪಬನ್ಮೂಲಕ ನಿರ್ವಹಣೆ ಕಾಮಗಾರಿಗಳ ಜಾರಿ, ಮಹಿಳಾ ಕೂಲಿಕಾರರನ್ನು ಒಳಗೊಂಡು ಐಇಸಿ ಚಟುವಟಿಕೆ, ಬೂದು ನೀರು ನಿರ್ವಹಣೆ, ಸಕಾಲಿಕ ವೇತನ ಪಾವತಿ, ಸಾಮಾಜಿಕ ಪರಿಶೋಧನೆಯಲ್ಲಿನ ಪ್ರಗತಿ ಹಾಗೂ ರಾಜ್ಯ ಮಟ್ಟದಲ್ಲಿ ಪರಿಗಣಿಸಲಾದ ಇತರೆ ಅಂಶಗಳನ್ನು ಗಮನಿಸಿ ಜಿಲ್ಲಾ ಪಂಚಾಯಿತಿಗೆ ಈ ಪ್ರಶಸ್ತಿ ಸಂದಾಯವಾಗಿದೆ.
ಇನ್ನು ದಾವಣಗೆರೆ ತಾಲೂಕು ಪಂಚಾಯಿತಿಯಿಂದ 4 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿ, ಕೆರೆ ಕಾಲುವೆಗಳ ಹೂಳೆತ್ತಿದ್ದರಿಂದ ಬರಗಾಲ ನಿರ್ವಹಣೆಗೆ ಅನುಕೂಲವಾಗಿದೆ. ಶಾಲಾ ಕಾಂಪೌಂಡ್, ಶಾಲಾ ಮೈದಾನ, ಶೌಚಗೃಹ ಮೊದಲಾದ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದರ ಕಾರಣಕ್ಕೆ ಪುರಸ್ಕಾರಕ್ಕೆ ಅರ್ಹವಾಗಿದೆ.
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಸಭಾಂಗಣದಲ್ಲಿ ಫೆ. 5ರಂದು ನಡೆಯಲಿರುವ ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಎಲ್ಲ ಪ್ರಶಸ್ತಿ ವಿತರಣೆಯಾಗಲಿವೆ.
---