

ದಾವಣಗೆರೆ: ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಅರಸುವುದನ್ನು ಬಿಟ್ಟು ಉದ್ಯೋಗದಾತರಾಗುವತ್ತ ಗಮನ ಹರಿಸಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಸಲಹೆ ನೀಡಿದರು.
ಇಲ್ಲಿನ ಜಿ.ಎಂ.ವಿಶ್ವವಿದ್ಯಾಲಯದಲ್ಲಿ ಮಾಜಿ ಸಂಸದ ಜಿ.ಮಲ್ಲಿಕಾರ್ಜುನಪ್ಪ ಅವರ 96ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದಲ್ಲಿ ವರ್ಷಕ್ಕೆ ಲಕ್ಷಾಂತರ ಎಂಜಿನಿಯರಿಂಗ್ ಪದವೀಧರರು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಕಲ್ಪಿಸುವುದು ಕಷ್ಟ. ಸ್ವಂತ ಉದ್ದಿಮೆ ಸ್ಥಾಪಿಸುವ ಕನಸು ಯುವಕರಲ್ಲಿಲ್ಲ. ಉದ್ಯಮ ಆರಂಭಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆ ಕೂಡ ತಿಳಿದಿಲ್ಲ. ಹೀಗಾಗಿ ಉದ್ಯಮ ಕೌಶಲಗಳನ್ನು ವಿಶ್ವವಿದ್ಯಾಲಯಗಳು ಕಲಿಸಿಕೊಡಬೇಕೆಂದು ಕಿವಿಮಾತು ಹೇಳಿದರು.
ಉತ್ತಮ ರಾಜಕೀಯ ಪಟುವಾಗಿದ್ದ ಜಿ. ಮಲ್ಲಿಕಾರ್ಜುನಪ್ಪ, ಅಟಲ್ ಬಿಹಾರಿ ವಾಜಪೇಯಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. 1967ರಲ್ಲಿಯೇ ಅರಿಶಿಣ ಕುಂಕುಮ ಸಿನಿಮಾ ನಿರ್ದೇಶನ ಮಾಡಿದ್ದರು. ಬಹುಮುಖ ಪ್ರತಿಭೆ ಹೊಂದಿದ್ದ ಅವರು ಉತ್ತಮ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ದೇಶವು ಆರ್ಥಿಕವಾಗಿ ಸ್ವಾವಲಂಬಿಯಾಗುವ ಆತ್ಮನಿರ್ಭರ ಭಾರತಕ್ಕೆ ಮಲ್ಲಿಕಾರ್ಜುನಪ್ಪ ಅವರ ಕುಟುಂಬದ ಕೊಡುಗೆ ಅನನ್ಯ ಎಂದರು.
ಮಲ್ಲಿಕಾರ್ಜುನಪ್ಪ ಅವರು 1999ರಲ್ಲಿ ಕೇಂದ್ರ ಸಚಿವರಾಗುವ ಅವಕಾಶ ತಿರಸ್ಕರಿಸಿದ್ದರಿಂದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಈ ಭಾಗ್ಯ ದೊರಕಿತು. ಮಲ್ಲಿಕಾರ್ಜುನಪ್ಪ ಅವರ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ಕೂಡ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಜಿ.ಎಂ. ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜ್, ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ, ಶ್ರೀಶೈಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್, ಖಜಾಂಚಿ ಜಿ.ಎಸ್.ಅನಿತ್‌ಕುಮಾರ್, ಕುಲಪತಿ ಪ್ರೊ.ಶಂಕಪಾಲ್, ಸಹಕುಲಪತಿ ಎಚ್.ಟಿ.ಮಹೇಶಪ್ಪ, ಕುಲಸಚಿವ ಸುನಿಲ್ ಕುಮಾರ್ ಇದ್ದರು.