

ಡಿ.ಎಂ.ಮಹೇಶ್, ದಾವಣಗೆರೆ
ಮೊಬೈಲ್ ವ್ಯಸನ ಚಿಣ್ಣರನ್ನೂ ಬಿಡದಂತೆ ಕಾಡುವ ಈ ಕಾಲದಲ್ಲಿ ಓದುವ ಹವ್ಯಾಸ ಮರೀಚಿಕೆಯಾಗಿದೆ. ಹೀಗಾಗಿ ಕಿರಿಯ-ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನೇ ಗುರಿಯಾಗಿಸಿ ಅವರಲ್ಲಿ ಓದುವ ಅಭಿರುಚಿ ಬೆಳೆಸಲು ಶಿಕ್ಷಣ ಇಲಾಖೆ ‘ಓದುವ ಅಭಿಯಾನ’ ಎಂಬ ಹೊಸ ಕಾರ್ಯಕ್ರಮ ರೂಪಿಸಿದೆ.
ಒಂದರಿಂದ ಏಳನೇ ತರಗತಿವರೆಗಿನ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಇದು ಮಂಗಳವಾರ ಚಾಲನೆಗೊಳ್ಳಲಿದೆ. ದಾವಣಗೆರೆ ಜಿಲ್ಲೆಯ 1498 ಶಾಲೆಗಳಲ್ಲೂ ಅಭಿಯಾನ ಮಕ್ಕಳ ಕಂಠದ ರೂಪಗಳಲ್ಲಿ ಪ್ರತಿಧ್ವನಿಸಲಿದೆ.
ಚಟುವಟಿಕೆಗ ಮೂಲಕವಾಗಿ ಓದುವಿಕೆ ಮತ್ತು ಪುಸ್ತಕಗಳ ಬಗ್ಗೆ ಒಲವು ಬೆಳಸುವುದು. ಮಕ್ಕಳಲ್ಲಿ ಗ್ರಹಿಕೆ ಸಾಮರ್ಥ್ಯ, ಅರಿವಿನ ಕೌಶಲಗಳನ್ನು ವೃದ್ಧಿಸುವ ಉದ್ದೇಶದಡಿ ಸೆ. 3ರಿಂದ 18ರವರೆಗೆ ಹಾಗೂ ಸೆ. 26ರಿಂದ 30ರ ವರೆಗೆ ಒಟ್ಟು 21 ದಿನಗಳ ಕಾಲ ಅಭಿಯಾನ ನಡೆಯಲಿದೆ.
ಈ ಕಾರ್ಯಕ್ರಮ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಮಾರ್ಗದರ್ಶಿ ವಿನ್ಯಾಸಗೊಳಿಸಿದ್ದು, ನಿತ್ಯದ ಚಟುವಟಿಕೆಗಳ ಸವಿವರ ವಿನ್ಯಾಸದೊಂದಿಗೆ ಕಥೆಯ ಚಟುವಟಿಕೆ ಮಾರ್ಗದರ್ಶಿ ವಿವರಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಸಂಬಂಧ ವಿವಿಧ ಹಂತದ ಶಿಕ್ಷಣಾಧಿಕಾರಿಗಳು, ಶಾಲೆಗಳಿಗೆ ಡಿಡಿಪಿಐ ಈಗಾಗಲೆ ಮಾರ್ಗದರ್ಶನ ನೀಡಿದ್ದಾರೆ.
ಪ್ರಾರ್ಥನಾ ಸಭೆ, ನಲಿಕಲಿ ತರಗತಿ ಅಥವಾ ಗ್ರಂಥಾಲಯದ ಅವಧಿ.. ಹೀಗೆ ಶಾಲೆಯ ದಿನಚರಿಗೆ ಅನ್ವಯವಾಗುವಂತೆ, ಬೋಧನೆಗೆ ತೊಂದರೆಯಾಗದಂತೆ ಇವನ್ನು ರೂಪಿಸಲಾಗಿದೆ. ಶಿಕ್ಷಕರು ಕ್ರಿಯಾಶೀಲ ಚಟುವಟಿಕೆಗಳನ್ನು ಶಾಲೆಗಳಲ್ಲಿ ಬಳಸಿಕೊಳ್ಳಲು ಸೂಚಿಸಲಾಗಿದೆ.
ಏನೇನಿವೆ ಮಾದರಿ?
ನನ್ನ ಶಾಲಾ ಗ್ರಂಥಾಲಯ, ನನ್ನ ಸಮುದಾಯ, ನನ್ನ ಶಾಲಾ ಹಬ್ಬ ಎಂಬ ಶೀರ್ಷಿಕೆಗಳಡಿ ಮೂರು ವಾರಗಳ ಕಾಲ ಚಟುವಟಿಕೆಗಳು ನಡೆಯಲಿವೆ. ಸೆ.3ರಂದು ರೀಡ್-ಎ-ಥಾನ್ ನಡೆಯಲಿದ್ದು, ಮಕ್ಕಳು, ಶಿಕ್ಷಕರು, ಕ್ಲಸ್ಟರ್, ವಲಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಳಗ್ಗೆ 11 ಗಂಟೆಯಿಂದ ಅರ್ಧ ತಾಸು ಕಾಲ ತಮ್ಮ ನೆಚ್ಚಿನ ಪುಸ್ತಕವನ್ನು ಓದಲಿದ್ದಾರೆ.
ಶಾಲಾ ಗ್ರಂಥಾಲಯದ ಪುಸ್ತಕ ಸರಿಪಡಿಸುವುದು, ಕಥೆಯನ್ನು ಗಟ್ಟಿಯಾಗಿ ಓದುವುದು. ಕಾಮಿಕ್ ಕಥೆ ಓದುವಿಕೆ, ಸಾರ್ವಜನಿಕ ಗ್ರಂಥಾಲಯ ಭೇಟಿ ಅಥವಾ ಅಂತರ್ಜಾಲ ಮೂಲಕ ಮಾಹಿತಿ ಪಡೆಯುವುದು, ಅಜ್ಜಿ-ತಾತನಿಗಾಗಿ ಓದುವುದು, ಮನೆಯಲ್ಲೇ ಓದುವ ಪರಿಸರದ ಚಾರ್ಟ್ ನಿರ್ಮಿಸುವುದು, ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹಿಸುವುದು, ಪಾಲಕರಿಂದ ಕಥೆ ಹೇಳಿಸುವುದು, ಪುಸ್ತಕಗಳ ಜಾಗೃತಿ ಜಾಥಾ ಆಯೋಜನೆ, ಓದಿದ ಪುಸ್ತಕದ ತುಣುಕನ್ನು ಅಭಿನಯಿಸುವುದು, ಚಿತ್ರಕಲೆ, ರಸಪ್ರಶ್ನೆ, ಸ್ವಂತ ಕಥೆ ರಚಿಸುವುದು, ಪದಗಳನ್ನು ಕಟ್ಟುವುದು, ಪಾತ್ರದ ಅನುಕರಣೆ ಮೊದಲಾದ ಚಟುವಟಿಕೆಗಳಿಗೆ ಆಯಾ ದಿನ ನಿಗದಿಪಡಿಸಲಾಗಿದೆ.
ಕಥೆಗಾಗಿ ಬಾರ್ಕೋಡ್
ಮಕ್ಕಳನ್ನು ಆಕರ್ಷಿಸಲು ತರಗತಿ/ವಯಸ್ಸಿಗೆ ಸೂಕ್ತವಾದ ಓದುವ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ, ಕಥೆಯ ಚಟುವಟಿಕೆ ಮಾರ್ಗದರ್ಶಿ ಪಿಡಿಎಫ್ ನೀಡಲಾಗಿದೆ. ಬಾರ್‌ಕೋಡ್ ಸ್ಕಾೃನ್ ಮಾಡಿ ಮಕ್ಕಳಿಗೆ ಕಥೆಗಳನ್ನು ಓದಿ ಹೇಳಬಹುದಾಗಿದೆ. ಮೋಡ ಯಾಕೆ ಮಳೆ ಸುರಿಸುತ್ತದೆ. ಕಪ್ಪೆಯ ನಕ್ಷತ್ರಭರಿತ ಕನಸು, ಚಳಿಗಾಲದ ಸ್ನೇಹ, ಕಾಡಿನಲ್ಲಿ ಘಮಘಮ, ಒಂದು ಹನಿ ನೀರು, ಮೀನುಗಳ ರಾಜಕುಮಾರಿ,. ಎರೆಹುಳುಗಳು ಮತ್ತು ರೈತನ ಮಿತ್ರ. ಅಪ್ಪಮ ಪ್ರಯತ್ನ, ಮಿಂಚುಹುಳು, ಪುಟ್ಟಿ ಮತ್ತು ಮುನ್ನಾ ಮೊದಲಾದ ದಿನಕ್ಕೊಂದರಂತೆ ಕಥೆಗಳ ಸರಣಿಯೇ ಇಲ್ಲಿದೆ.
----
ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದಂತೆ ಈ ಅಭಿಯಾನ ಮಕ್ಕಳಿಗಲ್ಲದೇ ಅಧಿಕಾರಿಗಳಿಗೂ ಅನುಕೂಲವಾಗಲಿದೆ. ಇದರ ಕಡ್ಡಾಯ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಇಂದಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದು ಅವರಲ್ಲಿ ಓದುವಿಕೆ ಜಾಗೃತಿ ಮೂಡಿಸಲು ಚಟುವಟಿಕೆಗಳು ನೆರವಾಗಲಿವೆ.
ಜಿ. ಕೊಟ್ರೇಶ್
ಡಿಡಿಪಿಐ
----