

ದಾವಣಗೆರೆ: ಸರ್ಕಾರಕ್ಕೆ ಪತ್ರ ಬರೆದಿದ್ದರ ಹಿನ್ನೆಲೆಯಲ್ಲಿ ದಾವಣಗೆರೆ-ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಅರಣ್ಯ, ಕಂದಾಯ ಇಲಾಖೆ ಭೂಮಿ ಒತ್ತುವರಿ ವಿಚಾರವಾಗಿ, ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹ್ಮದ್ ನೇತೃತ್ವದ ಮೂವರು ಅಧಿಕಾರಿಗಳ ತನಿಖಾ ತಂಡ ಸೋಮವಾರ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ನಡೆಸಲಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಗ್ಗೆ ವಿವರಿಸಿದರು. ಏ. 21ಕ್ಕೆ ನಾನು ಪತ್ರ ಬರೆದಿದ್ದರ ಹಿನ್ನೆಲೆಯಲ್ಲಿ, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಒತ್ತುವರಿ ಪರಿಶೀಲಿಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಮಳೆ ಕಾರಣಕ್ಕೆ ವಿಜಯನಗರ ಜಿಲ್ಲಾಧಿಕಾರಿ 2 ತಿಂಗಳ ಕಾಲಾವಕಾಶ ಕೇಳಿದರು. ಆದರೆ ದಾವಣಗೆರೆ ಜಿಲ್ಲಾಧಿಕಾರಿ ‘ಯಾವುದೂ ಒತ್ತುವರಿಯಾಗಿಲ್ಲ, ಎಲ್ಲವೂ ಸರಿ ಇದೆ’ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು.
ಆದರೆ, ತಂಡ ಬರುವ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಿದರಿ ಸಮೀಪದಲ್ಲಿ ಮುಚ್ಚಲ್ಪಟ್ಟಿದ್ದ ದೊಡ್ಡ ಹಳ್ಳವನ್ನು ಜೆಸಿಬಿ ಮೂಲಕ ರಾತ್ರೋರಾತ್ರಿ ತೆಗೆಯುವ ಪ್ರಯತ್ನ ನಡೆದಿದೆ. ಇದರ ಬಗ್ಗೆ ವಿಡಿಯೋ ಮಾಡಲಾಗಿದೆ. ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಜಿಲ್ಲಾ ಸಚಿವರಿಗೆ ಸಂಬಂಧಿಸಿದ 2500 ಎಕರೆ ಪ್ರದೇಶದಲ್ಲಿ ಹಳ್ಳ ಮುಚ್ಚಿದರೆ ಸುತ್ತಲಿನ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ರೈತರಿಗೆ ಬೆದರಿಸಿ ಜಮೀನು ಪಡೆಯುವ ಹುನ್ನಾರ ನಡೆದಿದೆ. ಆದರೆ ತಾವು ರೈತರ ಪರ ಹೋರಾಟ ಮುಂದುವರಿಸಲಿದ್ದೇವೆ. ಗಂಗೆ-ಭೂತಾಯಿಗೆ ದ್ರೋಹ ಮಾಡಿದವರಿಗೆ ಒಳಿತಾಗದು. ಬಡವರ ಶಾಪ ಸಚಿವರ ಕುಟುಂಬಕ್ಕೆ ತಟ್ಟಲಿದೆ ಎಂದೂ ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ 400 ಕೋಟಿ ರೂ. ಮೊತ್ತದ ಅಕ್ರಮ ಮರಳುಗಾರಿಕೆ ನಡೆದಿರುವುದಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಡಿ ರಾಜ್ಯದಲ್ಲಿ ಇನ್ನೆಷ್ಟು ಹಗರಣ ನಡೆದಿರಬಹುದು ಎಂದು ಹೇಳಿದರು.
ನನ್ನ ಮಿತ್ರ ದಿನೇಶ್ ಕೆ. ಶೆಟ್ಟಿ ಶಾಮನೂರು ಮನೆಯವರ ಸೇವೆ ಮಾಡಿದ್ದಕ್ಕೆ ದೂಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇನ್ನಷ್ಟು ಸೇವೆ ಮಾಡಿ ಶಾಸಕನಾಗಲಿ ಎಂದರು. ಹುಚ್ಚುನಾಯಿ ಕಡಿದವರಂತೆ ನಾನು ಮಾತನಾಡುವುದಾಗಿ ದಿನೇಶ್ ಕೆ ಶೆಟ್ಟಿ ಹೇಳಿದ್ದಾರೆ. ಆದರೆ ನನಗೆ ಕಚ್ಚಿದ ಹುಚ್ಚುನಾಯಿಯ ಹುಚ್ಚು ಹೋಗಲಾಡಿಸುತ್ತೇನೆ. ಭ್ರಷ್ಟಾಚಾರ ಬಯಲಿಗೆಳೆವ ಕೆಲಸ ಮುಂದುವರಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
* ತನಿಖೆಗೆ ಸಹಕರಿಸದಿದ್ದರೆ ರಾಹುಲ್‌ಗೆ ಪತ್ರ
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಗಣಿ ಇಲಾಖೆ ಹಗರಣದ ಬಗ್ಗೆ ಕಾಂಗ್ರೆಸ್‌ನವರೇ ದೂರಿರುವ ಹಿನ್ನೆಲೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಬೇಕು. ನಿರ್ದೋಷಿಯಾದ ನಂತರ ಮತ್ತೆ ಸಚಿವ ಸ್ಥಾನ ಅಲಂಕರಿಸಲಿ ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿ ಹಗರಣ ನಡೆದಿದೆ ಎಂದು ಪದೇ ಪದೇ ಆರೋಪಿಸುವ ಜಿಲ್ಲಾ ಸಚಿವರು ಅದರ ಬಗ್ಗೆಯೂ ತನಿಖೆ ನಡೆಸಲಿ. ನಿಜವಾದ ಕಳ್ಳರು ಯಾರು ಎಂಬುದು ಬಯಲಾಗಲಿ ಎಂದರಲ್ಲದೆ ಗಣಿ ಇಲಾಖೆಯ ಹಗರಣದ ತನಿಖೆಗೆ ಸಹಕರಿಸದಿದ್ದಲ್ಲಿ ಸಚಿವರ ವಿರುದ್ಧ ರಾಹುಲ್‌ಗಾಂಧಿ ಅವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ಎಸ್. ಜಗದೀಶ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಇದ್ದರು.