ಆಕ್ಷೇಪಾರ್ಹ ಫ್ಲೆಕ್ಸ್ ತೆರವಿಗೆ ಪೊಲೀಸರ ದೌಡು: ದಾವಣಗೆರೆಯ ಮಟ್ಟಿಕಲ್ ಬಳಿ ಬಿಗು ಪರಿಸ್ಥಿತಿ

1001123521.jpg
Published on

ದಾವಣಗೆರೆ: ಗುರುವಾರ ರಾತ್ರಿ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗೊಳಿಸಲು ಪೊಲೀಸರು ಮುಂದಾದಾಗ ನೂರಾರು ಹಿಂದು ಯುವಕರು ಜಮಾಯಿಸಿ, ಕಾಲಾವಕಾಶ ಕೇಳಿದ್ದ ಇಲ್ಲಿನ ಹಳೆ ಮಟ್ಟಿಕಲ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ಶುಕ್ರವಾರವೂ ಮುಂದುವರಿದಿದೆ.

ಇಲ್ಲಿನ ವೀರ ಸಾವರ್ಕರ್ ಯುವಕರ ಬಳಗ ಪ್ರತಿಷ್ಠಾಪಿಸಿದ್ದ ಗಣೇಶ ಮಂಟಪದ ಬಳಿ ಅಳವಡಿಸಿದ್ದ ಒಂದು ಫಲಕದ ಬಗ್ಗೆ ಪೊಲೀಸರು ಅನ್ಯರ ಮಾಹಿತಿ ಮೇರೆಗೆ ತೆರವಿಗೆ ಮುಂದಾದರು. ಛತ್ರಪತಿ ಶಿವಾಜಿಯು ಅಫ್ಜಲ್ ಖಾನ್ ನನ್ನು ಹುಲಿ ಉಗುರಿನಿಂದ ವಧೆ ಮಾಡುವ ಚಿತ್ರ ಹಾಗೂ ಶಿವಾಜಿಯಂತೆ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂಬ ಅಡಿಬರಹ ವಿದ್ದ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು

ಇದರ ತೆರವಿಗೆ ಪೊಲೀಸರು ಮುಂದಾಗುತ್ತಿದ್ದಂತೆ ಸಮಿತಿಯವರ ಜತೆ ಹಿಂದು ಮುಖಂಡರು, ನೂರಾರು ಯುವಕರು ಜಮಾಯಿಸಿದರು. ಪೊಲೀಸರ ಸಮಾಧಾನಕ್ಕೂ ಜಗ್ಗಲಿಲ್ಲ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿತು.

ಕಡೆಗೆ ಯುವಕರೊಂದಿಗೆ ಸಭೆ ನಡೆಸಿದ ಮುಖಂಡರು ಪೊಲೀಸರಿಗೆ ಶುಕ್ರವಾರ 10- 30ರವರೆಗೆ ಕಾಲಾವಕಾಶ ಕೇಳಿದ್ದು ಮುಂದಿನ ತೀರ್ಮಾನ ಕೖಗೊಳ್ಳಲಿದ್ದೇವೆ. ನಾಳೆ ಇದೇ ಸ್ಥಳದಲ್ಲಿ ಸಭೆ ಸೇರಿ ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ ಸೂಕ್ತ ಉತ್ತರ ನೀಡುವುದಾಗಿಯೂ ಮನವರಿಕೆ ಮಾಡಿದರು. ನಂತರ ಯುವಕರು ಸ್ಥಳದಿಂದ ಕದಲಿದರು.

ಸ್ಥಳದಲ್ಲಿ ಸಶಸ್ತ್ರ ಮೀಸಲು ಪಡೆಯೊಂದಿಗೆ ಪೊಲೀಸರು ಮೊಕ್ಕಾಂ ಮಾಡಿದ್ದಾರೆ. ಯುವಕರ ಜಮಾವಣೆಯಿಂದ ಮಟ್ಟಿಕಲ್ ಮುಖ್ಯ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಶಿವಾಜಿಯು ಅಫ್ಜಲ್ ಖಾನ್ ನನ್ನು ಚಾಣಾಕ್ಷತನದಿಂದ ವಧೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಈ ಚಿತ್ರದಿಂದ ಮತ್ತೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ಬರುವುದಾದರೆ ದಾವಣಗೆರೆಯಲ್ಲಿ ಹಿಂದು ಭಾವನೆಗೆ ಧಕ್ಕೆ ತರುವ ಅನೇಕ ಫ್ಲೆಕ್ಸ್ಗಳು ವರ್ಷಗಟ್ಟಲೇ ಇವೆ. ಅವು ತೆರವಾಗಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಪ್ರಶ್ನೆ ಮಾಡಿದರು.

ನಾಡದ್ರೋಹಿ ಟಿಪ್ಪು ಫ್ಲೆಕ್ಸ್ ತೆರವುಗೊಳಿಸಿದ ಮೇಲೆಯೇ ಶಿವಾಜಿ ಫ್ಲೆಕ್ಸ್ ತೆರವಾಗಲಿದೆ. ಶುಕ್ರವಾರ ಬೆಳಗ್ಗೆ ಹಿಂದು ಮುಖಂಡರು ಸಭೆ ನಡೆಸಲಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇಂದಿನ ಯುವಕರಿಗೆ ಇತಿಹಾಸ ತಿಳಿಸಬೇಕಿದೆ. ಹಾಗಾಗಿ ಫ್ಲೆಕ್ಸ್ ಹಾಕಲಾಗಿದೆ. ಪೊಲೀಸರು ಯಾರದೋ ಒತ್ತಡದಿಂದ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡಬಾರದು ಎಂದು ಮುಖಂಡ ಎಸ್ ಟಿ ವೀರೇಶ್ ತಿಳಿಸಿದರು.

ಡಿಜೆಯಿಂದ ಜನರ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ನಿಷೇಧ ಮಾಡುವುದಾದರೆ ಸುಪ್ರೀಂಕೋರ್ಟ್ ಆದೇಶದಂತೆ ಕಿರಿಕಿರಿ ತರುವ ಅನ್ಯ ಧರ್ಮೀಯರ ಮಂದಿರದ ಅತಿರೇಕದ ಶಬ್ಧವನ್ನೇಕೆ ತಡೆಯಲಾಗಿಲ್ಲ. ಅವರಿಗೆ ವಿಶೇಷ ಕಾನೂನು ಇದೆಯೆ ಎಂಬುದನ್ನು ಜಿಲ್ಲಾಡಳಿತ ಉತ್ತರಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net