

ದಾವಣಗೆರೆ: ರಾಜ್ಯ, ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ಹಂತದಲ್ಲಿ ಕೆಲಸ ಮಾಡಿಸಿಕೊಡುವ ಶಕ್ತಿ ನನ್ನಲ್ಲಿದೆ. ಇನ್ನು ಐದು ವರ್ಷ ನಿಮ್ಮ ಸಂಪರ್ಕದಲ್ಲಿರುತ್ತೇನೆ. ವಾರದಲ್ಲಿ 2-3 ದಿನ ಅತಿಥಿಗೃಹದಲ್ಲಿರುತ್ತೇನೆ. ನಾನೇ ಸಂಸದ ಎಂದುಕೊಂಡು ಬನ್ನಿ. ಜನಸೇವಕನಾಗಿ ಸಾರ್ವಜನಿಕ ಕೆಲಸಗಳಿಗೆ ಸ್ಪಂದಿಸುವೆ ಎಂಬುದಾಗಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.
ದಾವಣಗೆರೆಯಲ್ಲಿ ಶನಿವಾರ ಅಂಧ ಮಕ್ಕಳೊಂದಿಗೆ ಬೃಹತ್ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವುದರೊಂದಿಗೆ ಜನ್ಮದಿನ ಆಚರಿಸಿಕೊಂಡ ಅವರು, ಕ್ಷೇತ್ರದಲ್ಲಿ ಸೋತ ಮಾತ್ರಕ್ಕೆ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ನಮ್ಮ ಸರ್ಕಾರವಿಲ್ಲ ಎಂದು ವ್ಯಸನ ಪಡಬೇಕಿಲ್ಲ ಎಂದರು.
ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಮುಂಬರುವ ಜಿಪಂ, ತಾಪಂ ಪಾಲಿಕೆ ಚುನಾವಣೆಗಳಲ್ಲಿ ಗೆಲ್ಲಬೇಕಿದೆ. ದಾವಣಗೆರೆ-ಚಿತ್ರದುರ್ಗದಲ್ಲಿ ಸತತ 20 ವರ್ಷ ನಾನು ಸಂಸದನಾಗಿ ಕೆಲಸ ಮಾಡಿದ ಹೆಗ್ಗಳಿಕೆ ನನಗಿದೆ. ನಿಮ್ಮ ಋಣ ತೀರಿಸಬೇಕಿದೆ ಎಂದು ಹೇಳಿದರು.
ಅನಾರೋಗ್ಯದಿಂದಾಗಿ ಚುನಾವಣೆಗೆ ಸ್ಪರ್ಧಿಸಲ್ಲ, ನನ್ನ ಸೋದರನಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ. ವರಿಷ್ಠರು ಪತ್ನಿ ಗಾಯತ್ರಿ ಹೆಸರನ್ನು ಘೋಷಣೆ ಮಾಡಿದರು. ಕಾಂಗ್ರೆಸಿಗರು ನಮ್ಮವರನ್ನು ಬುಟ್ಟಿಗೆ ಹಾಕಿಕೊಂಡರು. ಆರೋಗ್ಯದ ಸಮಸ್ಯೆಯಿಂದಾಗಿ ಕೆಲವು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿಲ್ಲ. ಹೀಗಾಗಿ ಸೋಲಾಯಿತು. ಇಲ್ಲಿ ಕಾರ್ಯಕರ್ತರು, ನಾವಾಗಲೀ ಸೋತಿಲ್ಲ. ಆದರೆ ನರೇಂದ್ರ ಮೋದಿ ಅವರಿಗೆ ಒಂದು ಸೀಟು ಕೊಡುವುದನ್ನು ತಪ್ಪಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.