

ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಮೇಲ್ಸೇತುವೆ ಪಕ್ಕದ ಸರ್ವೀಸ್ ರಸ್ತೆಯಲ್ಲಿ, ಅಮಲು ಬರುವ ಸಿರಪ್ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಸವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸ್‌ಪಿಎಸ್ ನಗರದ ಶಿವಕುಮಾರ, ಮೆಹಬೂಬ್ ನಗರದ ಅಜಿಮುದ್ದೀನ್, ದೇವರಾಜ ಅರಸು ಬಡಾವಣೆಯ ಮಹಮ್ಮದ್ ಶಾರೀಕ್, ಚನ್ನಗಿರಿ ತಾಲೂಕು ಹೊನ್ನೆಬಾಗಿಯ ಸೈಯದ್ ಬಾಬು ಯೂನಸ್, ಚನ್ನಗಿರಿಯ ಅಬ್ದುಲ್ ಗಫರ್ ಬಂಧಿತರು.
ಆರೋಪಿತರು, ಪರವಾನಗಿ ಇಲ್ಲದೇ ಅಮಲು ಬರುವ ಸಿರಪ್ ಬಾಟಲಿಗಳನ್ನು ವೈದ್ಯರ ಸಲಹೆ ಇಲ್ಲದಲೇ ಯುವ ಸಮೂಹ ಹಾಗೂ ವ್ಯಸನಿಗಳಿಗೆ ಹೆಚ್ಚಿನ ಬೆಲೆಗೆ ಸುಲಭವಾಗಿ ಅಮಲು ಪದಾರ್ಥ ಗಳ ರೂಪದಲ್ಲಿ ದುರ್ಬಳಕೆಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳಿಂದ 100 ಮಿ.ಲೀ.ನ 340 ಕಾಪ್ ಸಿರಪ್ ಬಾಟಲಿಗಳು. 100 ಮಿ.ಲೀ.ನ 15 ಇತರ ಕಂಪನಿಯ 15 ಕಾಪ್ ಸಿರಪ್ ಬಾಟಲಿಗಳು, 20 ಸಣ್ಣ ಪೆಟ್ಟಿಗೆಯಲ್ಲಿದ್ದ ಮಾತ್ರೆಗಳು, ಒಂದು ಹೊಂಡಾ ಆಕ್ಟಿವಾ ಬೈಕ್, 1200 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಉಮಾಪ್ರಶಾಂತ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ನಿಗ್ರಹ ಪಡೆಯೊಂದಿಗೆ ನಗರ ಡಿವೈಎಸ್ಪಿ ಬಿ.ಶರಣಬಸವೇಶ್ವರ ಭೀಮರಾವ್, ಬಸವನಗರ ಠಾಣೆಯ ಪೊಲೀಸ್ ನಿರೀಕ್ಷಕ ನಂಜುಂಡಸ್ವಾಮಿ, ಪಿ.ಎಸ್.ಐ ಸಾಗರ ಅತ್ತರವಾಲ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.