ಐವರು ಆರೋಪಿಗಳ ಸೆರೆ  ಐರಣಿ ಮಠ ಹೆಸರಲ್ಲಿ ಹಣ ದ್ವಿಗುಣ ವಂಚನೆ

1000325313_20240820154742972.jpg
Published on

ದಾವಣಗೆರೆ: ಐರಣಿ ಮಠದ ಸ್ವಾಮೀಜಿ ಶಿಷ್ಯರೆಂಬ ನೆಪ ಹೇಳಿ, ನೀಡುವ ಹಣಕ್ಕೆ ಹೆಚ್ಚುವರಿ ಸೇರಿಸಿ ಮರಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, 2.80 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ15 ಲಕ್ಷ ರೂ. ಬೆಲೆಯ 3 ಕಾರು ಜಪ್ತು ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಇಲಿಯಾಜ್, ದಾವಣಗೆರೆ ಜಿಲ್ಲೆಯ ಕಿರಣ್ , ದಾದಾಪೀರ್, ಮಂಜುನಾಥ್, ಚಿತ್ರದುರ್ಗ ಜಿಲ್ಲೆಯ ಮಹಾಂತೇಶ್  ಬಂಧಿತ ಆರೋಪಿಗಳಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಕೆಂಚನಾಲ್ ಗ್ರಾಮದ ಚಮನ್‌ ಸಾಬ್ ಎಂಬುವರನ್ನು  2023ರ ಅ. 21ರಂದು ಸಂಪರ್ಕಿಸಿದ ಆರೋಪಿಗಳು  ನಾವು ಸ್ವಾಮೀಜಿ ಶಿಷ್ಯರು ಎಂದಿದ್ದಾರೆ. ನಮ್ಮ ಬಳಿ 100 ರೂ. ಮುಖಬೆಲೆಯ ನೋಟುಗಳಿದ್ದು, ನೀವು 500 ರೂ. ಮುಖಬೆಲೆ ನೋಟು ನೀಡಿದರೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡಿ ವಂಚಿಸಿದ್ದರು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಹರಿಹರ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಗಳಾದ ಮಂಜುನಾಥ ಎಸ್. ಕುಪ್ಪೇಲೂರು, ಚಿದಾನಂದಪ್ಪ ಹಾಗೂ ಅವರ ತಂಡ, ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಮಾಡಿದೆ.
ಆರೋಪಿ ಕಿರಣ್ ವಿರುದ್ಧ ರಾಮನಗರ ಜಿಲ್ಲೆಯ ಕುದೂರು  ಠಾಣೆಯಲ್ಲಿ 2019ರಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net