ಹೈಸ್ಕೂಲ್ ಮೈದಾನದಲ್ಲೇ ಈ ಬಾರಿ ಪಟಾಕಿ ವಹಿವಾಟು   ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಇಂಗಿತ

1000407614.jpg
Published on

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲೇ ದೀಪಾವಳಿ ಹಿನ್ನೆಲೆಯಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆ ತೆರೆಯಲು ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಹೇಳಿದರು.
ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಹಾಗೂ ವಿಶಾಲ ಕರ್ನಾಟಕ ಪಟಾಕಿ ವರ್ತಕರ ಸಂಘದ ಸಹಯೋಗದಲ್ಲಿ ನಗರದ ಬಿ.ಎಸ್.ಚನ್ನಬಸಪ್ಪ ಕಾಲೇಜು ಸಭಾಂಗಣದಲ್ಲಿ ಪಟಾಕಿ ವರ್ತಕರಿಗೆ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಸೇರಿ ಹಲವೆಡೆ ಈ ಹಿಂದೆ ಅಗ್ನಿ ಅವಘಡ ಆಗಿದ್ದವು. ಹೀಗಾಗಿ ನಗರದ ಒಳಗೆ ಪಟಾಕಿ ಮಳಿಗೆಗಳನ್ನು ಕೊಡುವುದು ಅನುಮಾನವಿತ್ತು. ಕಳೆದ ಬಾರಿಯೂ ಬೇರೆಡೆ ಜಾಗ ನಿಗದಿಯಾಗಿದ್ದರೂ ವರ್ತಕರ ಒತ್ತಡದಂತೆ ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರವಾಗಿತ್ತು. ಈ ಬಾರಿಯೂ ಇದೇ ಸ್ಥಳದಲ್ಲೇ ಮಾರಾಟಕ್ಕೆ ಅವಕಾಶ ಸಿಗಲಿದ್ದು ಅಂತಿಮ ಆಗಬೇಕಿದೆ ಎಂದರು.
ಗ್ರಾಹಕರು ಮತ್ತು ವರ್ತಕರ ಸುರಕ್ಷತೆ ಬಗ್ಗೆ ಕಾಳಜಿ ಅಗತ್ಯವಿದೆ. ಕಾನೂನು ಬಲಗೊಳ್ಳುತ್ತಿದೆ. ಹೀಗಾಗಿ ಪಟಾಕಿ ಗೋದಾಮುಗಳನ್ನು ಊರ ಹೊರವಲಯದಲ್ಲಿ ಮಾಡಬೇಕು. ಊರು ಬೆಳೆದಂತೆಲ್ಲ ನಗರದ ಒಳಗೇ ಗೋದಾಮು ಬಂದಿವೆ ಎಂದ ಅವರು, ಪಟಾಕಿ ವರ್ತಕರು ದುಡಿಮೆಯಷ್ಟೇ ಮುಖ್ಯವಾಗಿ ಸುರಕ್ಷತೆ ಕಡೆಗೆ ಗಮನ ನೀಡಬೇಕು ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಬೆಂಗಳೂರು ಹೊರತಾಗಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಗೋದಾಮು ಮತ್ತು ಸುರಕ್ಷತೆ ಕುರಿತು ತರಬೇತಿ ನೀಡಲಾಗುತ್ತಿದೆ. ನಾವು ನಿಮ್ಮ ಜತೆಗಿದ್ದೇವೆ. ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿದರೆ ಅನುಕೂಲವಿದೆ. ಶಾಂತ ರೀತಿಯಲ್ಲಿ ವಹಿವಾಟು ನಡೆಸಿ ಎಂದು ಕಿವಿಮಾತು ಹೇಳಿದರು.
ಉಪಮೇಯರ್ ಸೋಗಿ ಶಾಂತಕುಮಾರ್ ಮಾತನಾಡಿ ಜೀವಂತವಾಗಿ ಇದ್ದರೆ ವ್ಯಾಪಾರ ಮಾಡಲು ಸಾಧ್ಯ. ಸುರಕ್ಷತಾ ಕ್ರಮ ಕೈಗೊಂಡರೆ ವರ್ತಕರಿಗೇ ಅನುಕೂಲವಿದೆ. ನಿಮ್ಮ ಕುಟುಂಬಕ್ಕೆ ನೀವೇ ಆಧಾರ. ಹೀಗಾಗಿ ವಿಮೆ ಮಾಡಿಸಿ ಎಂದು ಸಲಹೆ ನೀಡಿದರು.
ವಿಶಾಲ ಕರ್ನಾಟಕ ಪಟಾಕಿ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ್ ಮಾತನಾಡಿ ಮೈಸೂರು ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆಯಬೇಕಿತ್ತು. ಅಂಗಡಿ ಹಾಗೂ ನಮ್ಮ ಸುರಕ್ಷತೆ ದೃಷ್ಟಿಯಿಂದ ತರಬೇತಿ ನೀಡಲಾಗುತ್ತಿದೆ. ಅನೇಕರು ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ತರಬೇತಿ ಪಡೆದವರಿಗೆ ಪರವಾನಗಿ ಕೂಡ ಸಿಗುತ್ತಿದೆ ಎಂದರು.
ಕಳೆದ ವರ್ಷ ಪಕ್ಕದ ಹಾವೇರಿಯಲ್ಲಿ ಆರು ಜನರು ಮೃತಪಟ್ಟರು. ಸಣ್ಣ ತಪ್ಪಿನಿಂದಾಗಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮಾರಾಟ ಮಳಿಗೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯ ಇದೆ. ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನೆ ಬೆಳಗಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್.ನಾಗೇಶ್ ಮಾತನಾಡಿ ಬೆಂಕಿ, ಎಲೆಕ್ಟ್ರಾನಿಕ್, ಪಟಾಕಿ, ಸ್ಫೋಟದ ಮುನ್ನೆಚ್ಚರಿಕೆ ಕುರಿತು ತರಬೇತಿ ನೀಡಲಾಗುತ್ತದೆ. ಪಟಾಕಿ ವ್ಯಾಪಾರ ಮಾತ್ರವಲ್ಲದೇ, ದಿನನಿತ್ಯದ ಜೀವನಕ್ಕೆ ಕೂಡ ಈ ತರಬೇತಿಯಿಂದ ಅನುಕೂಲ ಆಗಲಿದೆ ಎಂದು ಹೇಳಿದರು.
ಬೆಂಕಿಯ ಜೊತೆಗೆ ನಿರ್ಲಕ್ಷ್ಯ ಸಲ್ಲದು. ಜಾಗ್ರತೆ ವಹಿಸಿದರೆ ಮಾತ್ರ ಜ್ಯೋತಿ. ಇಲ್ಲವಾದರೆ ಅದು ಜ್ವಾಲೆಯಾಗುತ್ತದೆ. ಇಂಧನ, ಶಾಖ ಹಾಗೂ ಗಾಳಿ ಇದ್ದಾಗ ಮಾತ್ರ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ಬಗ್ಗೆ ಎಚ್ಚರವಿರಲಿ ಎಂದು ತಿಳಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ ಕುಮಾರ್, ಪಟಾಕಿ ವರ್ತಕರ ಸಂಘದ ಕಾರ್ಯದರ್ಶಿ ಆಯನಹಳ್ಳಿ ಶಿವಕುಮಾರ, ಶ್ರೀಕಾಂತ ಬಗೇರಾ, ಪ್ರಾಚಾರ್ಯ ಗುರುರಾಜ ಮಾಗಾನಹಳ್ಳಿ ಇದ್ದರು.
------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net