

ದಾವಣಗೆರೆ: ಕಾಂಗ್ರೆಸ್ ಸರ್ಕಾರದಲ್ಲಿ ಆದಾಯ ಕೊರತೆ ಇರುವಾಗ ‘ವ್ಯವಸ್ಥೆ ಸದೃಢವಾಗಿದೆ’ ಎಂದು ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ. ಆರ್ಥಿಕ ತಜ್ಞರು ಎಂದುಕೊಳ್ಳುವ ಮುಖ್ಯಮಂತ್ರಿಗಳು ಯಾವ ಆಧಾರದ ಮೇಲೆ ಸದೃಢವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಪಡಿಸಿದರು.
ಕರ್ನಾಟಕ ಸಾಲದ ಸುಳಿಯತ್ತ ಸಾಗುತ್ತಿದೆ. ಸಿದ್ದರಾಮಯ್ಯ ಹಿಮಾಚಲ ಪ್ರದೇಶದಂತೆ ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಬಳಕ್ಕಾಗಿ ಸಾಲ ಮಾಡುವ ಸರ್ಕಾರ ದಿವಾಳಿಯಾಗಿದೆ. ಆರ್ಥಿಕ ಸದೃಢತೆ ಎಲ್ಲಿಂದ ಬಂತು? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಎಸ್ ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡ ಸರ್ಕಾರ ದಲಿತರಿಗೆ ದ್ರೋಹ ಎಸಗಿದೆ. ಎಸ್ಪಿ, ಎಸ್ಟಿ ಜನಸಂಖ್ಯೆಯ ಆಧರಿಸಿ ಆಯಾ ರಾಜ್ಯಗಳು ಅನುದಾನ ಮೀಸಲಿಡಬೇಕೆಂಬ ಕೇಂದ್ರ ಸರ್ಕಾರದ ನಿಯಮವನ್ನು ಕಾಂಗ್ರೆಸ್ ಸರ್ಕಾರ ಪಾಲಿಸುತ್ತಿಲ್ಲ.
ಇದೇ ಸರ್ಕಾರ ಜಾರಿಗೆ ತಂದ ಎಸ್‌ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆಯಡಿ ನಿರೀಕ್ಷಿತ ಕೆಲಸ ನಡೆಯುತ್ತಿಲ್ಲ. ಈ ಕಾಯ್ದೆ ಪೂರ್ವದಲ್ಲಿಯೇ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನವನ್ನು ದಲಿತರ ಕಾಲನಿಗಳಿಗೆ ನೀಡಿದೆ ಎಂದು ಸಮರ್ಥಿಸಿಕೊಂಡರು.
* ಭಿಕ್ಷುಕರ ತಟ್ಟೆಯಿಂದ ಕಳವು
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಲ್ಲಿ ಭಿಕ್ಷುಕರ ತಟ್ಟೆಗೆ ಚಿಲ್ಲರೆ ಹಾಕುವಂತೆ ಶಬ್ಧ ಮಾಡುತ್ತ ಕಳ್ಳತನ ಮಾಡುವಂತೆ ವರ್ತಿಸುತ್ತಿದೆ ಎಂದು ದೂರಿದ ಅವರು, ಕಳೆದೆರಡು ವರ್ಷದಲ್ಲಿ 25500 ಕೋಟಿ ರೂ. ಹಣ ದುರ್ಬಳಕೆಯಾಗಿದೆ. ಹೀಗಾಗಿ ದಲಿತ ಸಂಘಟನೆಗಳು, ಸಾಹಿತಿಗಳು, ಚಿಂತಕರು ಕಾಂಗ್ರೆಸ್ ಪರ ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದರು.
ಎಸ್‌ಸಿ ಎಸ್‌ಪಿ, ಟಿಎಸ್ ಪಿ ಎಂದರೆ ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆಯಾಗಿದೆ. ಮುಖ್ಯ ಯೋಜನೆಗೆ ಉಪ ಯೋಜನೆ ಅನುದಾನ ಬಳಸುವಂತಿಲ್ಲ. ಬಜೆಟ್‌ನಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ನೀಡಬೇಕಾದ್ದು ನಿಮ್ಮ ಕರ್ಮ. ಅದರೆ ಅದಕ್ಕಾಗಿ ಎಸ್‌ಸಿ ಎಸ್‌ಪಿ, ಟಿಎಸ್ ಪಿ ಯೋಜನೆ ಅನುದಾನ ಬಳಸಿದ್ದು ಎಸ್ಸಿ ಎಸ್ಟಿ ಜನರಿಗೆ ಮಾಡಿದ ದ್ರೋಹ. ಗ್ಯಾರಂಟಿ ಯೋಜನೆಗಳಿಗೆ ಬಡವರ ದುಡ್ಡು ಬೇಕಾ ಎಂದು ಪ್ರಶ್ನಿಸಿದರು.
ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವುದರಿಂದ ಎಲ್ಲಿಯೂ ಒಂದು ಎಕರೆ ಜಮೀನು ಖರೀದಿಯಾಗಿಲ್ಲ. ಗಂಗಾ ಕಲ್ಯಾಣ, ಭೂ ಒಡೆತನ, ಹೈನುಗಾರಿಕೆ, ವಸತಿ ಸೇರಿ ವಿವಿಧ ಯೋಜನೆಗಳು ಜಾರಿ ಆಗಿಲ್ಲ. ಈ ಬಾರಿಯ ಬಜೆಟ್‌ನಲ್ಲೂ ಈ ಅನುದಾನ ದುರ್ಬಳಕೆ ಮಾಡಿಕೊಂಡಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಎಸ್ಕಾಂಗಳು ನಷ್ಟದಲ್ಲಿದ್ದು, ಪರಿಹಾರ ಮಾರ್ಗ ಕಂಡುಕೊಳ್ಳುವಂತೆ ಸಿಎಂ, ಕೆಇಆರ್‌ಸಿಗೆ ಬರೆದ ಪತ್ರ ಹಿಂಪಡೆಯಬೇಕು. ಆಯೋಗ ವಿದ್ಯುತ್ ದರ ಏರಿಕೆ ಮಾಡಿದ ನಂತರ ‘ಆಯೋಗ ಸರ್ಕಾರದ ವ್ಯಾಪ್ತಿಯಲ್ಲಿಲ್ಲ’ ಎಂದು ಹೇಳಿ ನಾಲಗೆ ಬದಲಿಸಬಾರದು ಎಂದು ಹೇಳಿದರು.
ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಎಂ. ಬಸವರಾಜನಾಯ್ಕ, ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿ ಸ್ವಾಮಿ, ಎನ್. ರಾಜಶೇಖರ ನಾಗಪ್ಪ ಇತರರಿದ್ದರು.
---