

ದಾವಣಗೆರೆ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ 75ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯದಲ್ಲಿ 5 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
4462 ಗಣತಿದಾರರನ್ನು ನೇಮಿಸಲಾಗಿದ್ದು, 500ಕ್ಕೂ ಹೆಚ್ಚು ಮೇಲ್ವಿಚಾರಕರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 4.76 ಲಕ್ಷ ಮನೆಗಳಿದ್ದು ಈಗಾಗಲೇ 3.51 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಶನಿವಾರ ಸಂಜೆಗೆ ಶೇ.83ರಷ್ಟು ಗಣತಿ ಮುಗಿಯಲಿದೆ. ಅವಧಿಗೂ ಮುನ್ನವೇ ಗಣತಿ ಕಾರ್ಯ ಮುಕ್ತಾಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಂತ್ರಿಕ ಕಾರಣಕ್ಕೆ ಕಳೆದೆರಡು ದಿನಗಳಲ್ಲಿ ಸಮೀಕ್ಷೆ ಕುಂಠಿತವಾಗಿತ್ತು. ಅವೆಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ. ಸರ್ವೇ ಮುಗಿಸಿದವರಿಗೆ ರಜೆ ಪಡೆಯಲು ಸೂಚಿಸಲಾಗಿದೆ. ಕೈಬಿಟ್ಟು ಹೋಗಿದ್ದ ಮನೆಗಳ 20 ಸಾವಿರ ಯುಎಚ್‌ಐಡಿಗಳು ಸರ್ವೇಗೆ ಬಂದಿವೆ ಎಂದರು.
ನಗರ, ಪಟ್ಟಣ ವ್ಯಾಪ್ತಿಯಲ್ಲಿ ಮನೆಗಳನ್ನು ಗುರುತಿಸಲು ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರನ್ನು ನೆರವಿಗಾಗಿ ನೇಮಿಸಲಾಗಿದೆ. ಯುಎಚ್‌ಐಡಿಯಲ್ಲಿ ಮ್ಯಾಪ್ ಸಹ ಅಳವಡಿಸಲಾಗಿದೆ ಎಂದರು.
ಸಿಟಿಜನ್ ಆ್ಯಪ್ ಮೂಲಕ ನಾಗರಿಕರು ಸ್ವಯಂ ಘೋಷಣೆಯ ಮೂಲಕವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಡಿ ಮಾಹಿತಿ ದಾಖಲಿಸಬಹುದು. ಹೈಕೋರ್ಟ್ ಮಧ್ಯಂತರ ಆದೇಶದನ್ವಯ ಮಾಹಿತಿ ನೀಡುವುದು ಕಡ್ಡಾಯವಲ್ಲ. ಅವರ ಇಚ್ಛೆಗೆ ಬಿಡಲಾಗಿದೆ ಎಂದು ತಿಳಿಸಿದರು.
ಚನ್ನಗಿರಿ ತಾಲೂಕಿನಲ್ಲಿ ಒಬ್ಬರು ಒಂದೇ ದಿನದಲ್ಲಿ 76 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಚುರುಕಾಗಿ ಸಮೀಕ್ಷೆ ನಡೆಸಿದ ಟಾಪ್ 10 ಗಣತಿದಾರರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ. ಸಮೀಕ್ಷೆ ಕೈಗೊಳ್ಳದೆ, ತಾತ್ಸಾರ ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯನ್ನು ಪ್ಲಾಸ್ಟಿಕ್‌ಮುಕ್ತವಾಗಿಸಲು 7 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದರಿಂದಾಗಿ ಮಕ್ಕಳು ತಮ್ಮ ಮನೆಯಲ್ಲಿ ಉಪಯೋಗಿಸಿದ 3.5 ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ನೀಡಿದ್ದು ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.
ಆನಗೋಡು ಬಳಿ 30 ಎಕರೆ ಸ್ಥಳ ಗುರುತಿಸಿ ಕಟ್ಟಡ ತ್ಯಾಜ್ಯ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ. ನಗರದಲ್ಲಿ ಮೂರು ಕಡೆ ತ್ಯಾಜ್ಯ ಸಂಗ್ರಹ ಘಟಕಗಳನ್ನು ಗುರುತಿಸಿದ್ದು ಪಾಲಿಕೆಯಿಂದಲೇ ನಿಗದಿತ ಬಾಡಿಗೆಯೊಂದಿಗೆ ಸಾಗಣೆಗೆ ಕ್ರಮ ಕೈಗೊಳ್ಳುವ ಮೂಲಕ ನಗರದ ಸ್ವಚ್ಛತೆಗೆ ಕ್ರಮವಹಿಸಲಾಗಿದ್ದು ನಾಗರಿಕರು ಸಹಕರಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಡಿಸಿ ಶೀಲವಂತ ಶಿವಕುಮಾರ್ ಇದ್ದರು.
-----------