

ದಾವಣಗೆರೆ: ಅಲೆಮಾರಿ, ಅರೆ ಅಲೆಮಾರಿಗಳ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸೋಣ ಎಂದು ಬೆಂಗಳೂರಿನ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಬಸವ ರಮಾನಂದ ಸ್ವಾಮೀಜಿ ಸಲಹೆ ನೀಡಿದರು.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಿಂದ ಕುವೆಂಪು ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲೆಮಾರಿ-ಅರೆ ಅಲೆಮಾರಿಗಳ ರಾಜ್ಯ ಮಟ್ಟದ ಸಾಹಿತ್ಯ-ಸಾಂಸ್ಕೃತಿಕ ಕಲೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಲೆಮಾರಿಗಳಿಗೆ ರಾಜ್ಯದಲ್ಲಿ ನಾಲ್ಕು ಹಾಸ್ಟೆಲ್‌ಗಳಿವೆ. ಜಿಲ್ಲಾವಾರು ಪ್ರತ್ಯೇಕ ಹಾಸ್ಟೆಲ್ ನಿರ್ಮಾಣ ಆಗಬೇಕಿದೆ. ಭೂ ರಹಿತ ಅಲೆಮಾರಿಗಳನ್ನು ಒಕ್ಕೂಟ ಪಟ್ಟಿ ಮಾಡಿದರೆ ಸರ್ಕಾರದ ಬಳಿ ನಿಯೋಗ ತೆರಳಿ ಭೂಮಿ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಡ ತರೋಣ. ನಿಮ್ಮೊಂದಿಗೆ ನಾವೂ ಬರುತ್ತೇವೆ ಎಂದು ಹೇಳಿದರು.
ಸಮುದಾಯ ಭವನಗಳಿಗೆ 10 ಕೋಟಿ ರೂ. ಮೀಸಲಿರುವ ಸರ್ಕಾರ, 75 ಲಕ್ಷ ಜನಸಂಖ್ಯೆಯುಳ್ಳ ಅಲೆಮಾರಿ, ಅರೆ ಅಲೆಮಾರಿ ಜನರ ಅಭಿವೃದ್ಧಿಗಾಗಿ ಇರುವ ನಿಗಮಕ್ಕೆ 5 ಕೋಟಿ ರೂ. ನೀಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚು ಉಪಜಾತಿಗಳಿದ್ದು, 250 ಜಾತಿಗಳಿಗೆ ಪ್ರಮಾಣಪತ್ರ ಸಿಗುತ್ತಿದೆ. ಉಳಿದವಕ್ಕೆ ಸಿಗುತ್ತಿಲ್ಲ. ದೊಂಬಿದಾಸರು, ಜೋಗಿ ಜನಾಂಗದವರು ಮೂಲೆಗುಂಪಾಗಿದ್ದಾರೆ. ಹಾವು ಹಿಡಿವ ಸಮುದಾಯವರಿಗೆ ಪರಿಹಾರದ ಮಾಹಿತಿ ಇಲ್ಲ. ಸಾಮಾಜಿಕ ನ್ಯಾಯ ಮತ್ತು ಯೋಜನೆಗಳು ಕೇವಲ ಸರ್ಕಾರದ ಪುಸ್ತಕದಲ್ಲಿವೆ. ಅರಿವು ಮೂಡಿಸುವಲ್ಲಿ ಸರ್ಕಾರವೂ ವಿಫಲವಾಗಿದೆ ಎಂದು ದೂರಿದರು.
ಅಲೆಮಾರಿ ಜನರಲ್ಲಿ ಸ್ವಾತಂತ್ರೃಪೂರ್ವದಲ್ಲಿ ಶಿಕ್ಷಣದ ಪ್ರಮಾಣ ಶೇ.1ರಷ್ಟಿತ್ತು,. ಇದೀಗ ಶೇ.7ಕ್ಕೆ ತಲುಪಿದೆ. ನಿಮ್ಮ ಮಕ್ಕಳನ್ನು ಓದಿಸಲಾಗದಿದ್ದರೆ ನಮ್ಮ ಮಠಕ್ಕೆ ತಂದುಬಿಡಿ. ಮಕ್ಕಳು ಬಯಸುವವರೆಗೂ ಉಚಿತ ಶಿಕ್ಷಣ ಓದಿಸುತ್ತೇವೆ ಎಂದು ಭರವಸೆ ನೀಡಿದರು.
ಅನೇಕ ಕುಲಕಸುಬುಗಳು ಹೈಜಾಕ್ ಆದರೂ ಯಾರೂ ಪ್ರತಿಭಟಿಸುತ್ತಿಲ್ಲ ಎಂದು ವಿಷಾದಿಸಿದ ಸ್ವಾಮೀಜಿ, ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯನ್ನ್ನು ಅಲೆಮಾರಿ ಜನಾಂಗದ ಮಕ್ಕಳಿಗಾಗಿ ವೃತ್ತಿಪರ ಶಿಕ್ಷಣ ಮತ್ತು ಕಸುಬು ಆಧಾರಿತ ಶಿಕ್ಷಣವಾಗಿ ಮಾರ್ಪಾಡುಗೊಳಿಸಬೇಕು ಎಂದರು.
ಛಲವಾದಿ ಮಹಾಸಂಸ್ಥಾನದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ ಅತಿ ಹಿಂದುಳಿದ ಸಮಾಜಗಳಿಗೆ ದೇವರು-ಧರ್ಮ ಮತ್ತು ಅಧ್ಯಾತ್ಮ ಎಂಬುದು ಆಜನ್ಮ ಸಿದ್ಧ ಹಕ್ಕು. ಆದರೆ ನಾವು ಮೂಢನಂಬಿಕೆಗಳ ಆಚರಣೆ ಮೂಲಕ ನಮ್ಮ ಕೈ-ಕಾಲುಗಳ ಜತೆಗೆ ಮಿದುಳಿಗೂ ಬೇಡಿ ಹಾಕಿಕೊಂಡಿದ್ದೇವೆ, ನಮ್ಮನ್ನೇ ಹಿಂಸಿಸಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.
ಅಲೆಮಾರಿ ಅರೆ ಅಲೆಮಾರಿಗಳ ಮಕ್ಕಳಿಗೆ ಯುಪಿಎಸ್‌ಇ ತರಬೇತಿ ನೀಡಲು ಛಲವಾದಿ ಮಠ ಬದ್ಧವಾಗಿದೆ ಎಂದ ಶ್ರೀಗಳು, ಹಿಂದುಳಿದ ಸಮಾಜಗಳು ಮತಗಳನ್ನು ಮಾರಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಅಲೆಮಾರಿ, ಅರೆ ಅಲೆಮಾರಿಗಳ ಆಯೋಗ ರಚಿಸಬೇಕು. ಸರ್ಕಾರಿ ಜಾಗದಲ್ಲಿ ಕನಿಷ್ಠ 10 ವರ್ಷ ವಾಸಿಸಿದ ಈ ಮಾಜದವರಿಗೆ ಪಹಣಿ, ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.
ಅಲೆಮಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಕಲ್ಪಿಸುವ ಹಿಂದಿನ ಬಜೆಟ್‌ನ ಘೋಷಣೆೆ ಕಾರ್ಯಗತವಾಗಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಯಾವುದೇ ಸರ್ಕಾರ ಭಂಡತನ ಪ್ರದರ್ಶಿಸಿದಲ್ಲಿ ಒಕ್ಕೂಟ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ ಅಲೆಮಾರಿ, ಅರೆ ಅಲೆಮಾರಿಗಳ ಜನರು ತಮ್ಮಲ್ಲಿನ ಜಾನಪದ ಕಲೆಗಳನ್ನು ಉಳಿಸಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗೊಲ್ಲ ಸಮುದಾಯದಲ್ಲಿನ ಅನಿಷ್ಠ ಪದ್ಧತಿ ದೂರಮಾಡಬೇಕು ಎಂದು ಹೇಳಿದರು.
ಅಲೆಮಾರಿಗಳ ನಿಗಮಕ್ಕೆ ಹೆಚ್ಚಿನ ಅನುದಾನ, ಅವರ ಮಕ್ಕಳಿಗೆ ಮೊರಾರ್ಜಿ ಶಾಲೆಗಳಲ್ಲಿ ಶೇ.5ರಷ್ಟು ನೇರ ಪ್ರವೇಶಾತಿ, ಆಯೋಗ ರಚನೆ ಮೊದಲಾದ ವಿಚಾರದಲ್ಲಿ ಸಿಎಂಗೆ ಒತ್ತಡ ತರಲಿದ್ದೇನೆ. ನಿಯೋಗದಲ್ಲೂ ಭಾಗಿಯಾಗುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ ಸಮಾಜದವರು ಶಿಕ್ಷಣ-ಸಂಸ್ಕಾರಕ್ಕೆ ಒತ್ತು ನೀಡಬೇಕು. ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸಂಘಟನೆಗೆ ಬರಬೇಕೇ ಹೊರತು ವ್ಯಕ್ತಿಗತ ಬದುಕಿಗಾಗಿ ಬರಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹುಮ್ನಾಬಾದ್‌ನ ಹೇಳವ ಸಮಾಜ ಗುರುಪೀಠದ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಎಂ. ಪ್ರಕಾಶ್, ಮುಖಂಡರಾದ ತುಕಾರಾಂ ಸುರ್ವೆ, ವೈ. ಕುಮಾರ್, ತಿಪ್ಪೇಸ್ವಾಮಿ, ವೀರೇಶ್‌ರಾವ್ ಪಾಚಂಗೆ, ಪ್ರತಾಪ್‌ಕುಮಾರ್ ಜೋಗಿ, ಹುಲ್ಲಮ್ಮ ಅಪ್ಪಣ್ಣ ಜಾಡ್, ಎ.ವಿ.ರಾಜೇಶ್ವರಿ, ಕೆ.ಎಂ. ಮುನೇಗೌಡ, ನಾರಾಯಣಸ್ವಾಮಿ, ಕೆ. ಶ್ರೀನಿವಾಸ್ ಇತರರಿದ್ದರು.
ಪ್ರವರ್ಗ 1ರ ಜಾತಿಗಳಲ್ಲಿ ಹಾವಾಡಿಗರೂ ಇದ್ದೇವೆ. ಕರಡಿ ಕುಣಿಸುವವರಿದ್ದೇವೆ, ಪಶು-ಪಕ್ಷಿಗಳನ್ನೇ ನಾವು ಪಳಗಿಸುವಾಗ ರಾಜಕಾರಣಿಗಳನ್ನೇಕೆ ಆಡಿಸಬಾರದು? ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಸ್ಪಂದಿಸದ ನಾಯಕರನ್ನು ವಿಧಾನಸಭೆ ಹಾಗೂ ಸಂಸತ್ತು ಪ್ರವೇಶಿಸುವುದನ್ನೇ ತಡೆಯುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯೋಣ.
ಶ್ರೀ ಬಸವನಾಗಿದೇವ ಸ್ವಾಮೀಜಿ
ಛಲವಾದಿ ಮಹಾಸಂಸ್ಥಾನದ ಪೀಠಾಧೀಶ.
----