ನ್ಯಾನೋ ಯೂರಿಯಾ ಮಣ್ಣಿಗೆ ಶಕ್ತಿ

1001023839.jpg
Published on

ದಾವಣಗೆರೆ: ಹರಳು ರೂಪದ ಯೂರಿಯಾ ರಸಗೊಬ್ಬರ ಬದಲಾಗಿ ನ್ಯಾನೋ ಯೂರಿಯಾ ಬಳಸುವುದರಿಂದ ಹೆಚ್ಚಿನ ಇಳುವರಿ ಕಾಣಬಹುದು. ರೈತರ ಹಣ, ಸಮಯ ಉಳಿತಾಯವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ ಹೇಳಿದರು.

ಕೃಷಿ ಇಲಾಖೆ, ಇಫ್ಕೋ ಸಂಸ್ಥೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ರೈತ ಮಂಜಪ್ಪ ಇವರ ಮೆಕ್ಕೆಜೋಳ ಜಮೀನಿಗೆ ಡ್ರೋಣ್ ಮೂಲಕ ನ್ಯಾನೋ ಯೂರಿಯಾ ದ್ರಾವಣ ಸಿಂಪರಣೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹರಳಿನ ಯೂರಿಯಾ ರಸಗೊಬ್ಬರವನ್ನು ಸಿಂಪರಣೆ ಮಾಡಿದರೆ ಬೆಳೆಗಳಿಗೆ ಶೇ.60ರಷ್ಟು ಗೊಬ್ಬರದ ಲಾಭ ಸಿಕ್ಕರೆ, ನ್ಯಾನೋ ಯೂರಿಯಾದಿಂದ ಶೇ.80ರಷ್ಟು ಲಭ್ಯವಾಗಲಿದೆ. ಒಂದು ಎಕರೆ ಪ್ರದೇಶವನ್ನು ಏಳರಿಂದ ಹತ್ತು ನಿಮಿಷದಲ್ಲಿ ಡ್ರೋಣ್ ಮುಖಾಂತರ ಸಿಂಪರಣೆ ಮಾಡಬಹುದು. ಇದರಿಂದ ರೈತರಿಗೆ ಸಮಯದ ಉಳಿತಾಯ, ಸಕಾಲದಲ್ಲಿ ಸಿಂಪರಣೆ ಹಾಗೂ ಕೂಲಿಯಾಳುಗಳ ಖರ್ಚು ಉಳಿಯುತ್ತದೆ ಎಂದರು.

ಹರಳು ರೂಪದ ಯೂರಿಯಾದ ಹೆಚ್ಚಿನ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗಿ, ಬೆಳೆಗಳಿಗೆ ಅನುಕೂಲ ಮಾಡುವ ಸೂಕ್ಷ್ಮಾಣು ಜೀವಿಗಳು ನಾಶವಾಗಲಿವೆ. ಪ್ರತಿ ಲೀಟರ್ ನೀರಿಗೆ 5 ಮಿ.ಲೀ ನ್ಯಾನೋ ಯೂರಿಯಾ ದ್ರಾವಣವನ್ನು ರೈತರು ಸ್ಪ್ರೇಯರ್ ಮುಖಾಂತರವೂ ಸಹ ಮೆಕ್ಕೆಜೋಳ, ತೊಗರಿ, ಭತ್ತ ಹಾಗೂ ಇತರೆ ಬೆಳೆಗಳಿಗೆ ಸಿಂಪರಣೆ ಮಾಡಬಹುದು.

ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ. ತಾಂತ್ರಿಕತೆಯು ಸ್ವದೇಶದ್ದಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು. ಇದರ ಬಳಕೆಯಿಂದಾಗಿ ದೇಶದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಹಾಗೂ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಉಪ ಕೃಷಿ ನಿರ್ದೇಶಕ ಎಸ್. ಅಶೋಕ್ ಮಾತನಾಡಿ, ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ. ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುವುದನ್ನು ತಡೆಯಬಹುದು ಎಂದು ತಿಳಿಸಿದರು.

ಇಫ್ಕೋ ಸಂಸ್ಥೆ ಅಧಿಕಾರಿ ವಿನಯ್ ಕುಮಾರ್ ಇವರು ಮಾತನಾಡಿ, ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ. ತಾಂತ್ರಿಕತೆ ಹಾಗೂ ಬೆಳೆಗಳಿಗೆ ಆಗುವ ಅನುಕೂಲತೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಆರ್. ಶ್ರೀನಿವಾಸ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹೊನ್ನೂರು ಶಾಖೆಯ ಅಧ್ಯಕ್ಷ ಪರಮೇಶ್ವರಪ್ಪ, ನಿರ್ದೇಶಕರಾದ ಎಚ್.ಜಿ. ಮಂಜುನಾಥ, ವೀರೇಶ್, ಕಾರ್ಯದರ್ಶಿ ಹಾಲಪ್ಪ, ಗ್ರಾಪಂ ಸದಸ್ಯ ಶಿವಕುಮಾರ್ ಇತರರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net