

ದಾವಣಗೆರೆ: ದೆಹಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಸೋಲಿನ ಭೀತಿಯಿಂದಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 20 ಸಾವಿರ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ದೂರಿದರು.
ಅಭಿವೃದ್ಧಿ ಆಧಾರಿತ ಚುನಾವಣೆ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಹೀಗಾಗಿ ವಾಮಮಾರ್ಗ ಅನುಸರಿಸುತ್ತಿದೆ. ಆದರೆ, ಮುಂದಿನ ದೆಹಲಿ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಲಿದೆ ಎಂದು ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅದಾನಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ. 2,500 ಕೋಟಿ ರೂ. ಸಾಲ ಪಡೆದು ಭಾರತದಲ್ಲಿ ಪ್ರಾಜೆಕ್ಟ್ ತೆಗೆದುಕೊಳ್ಳಲು ಲಂಚ ಕೊಟ್ಟಿದ್ದಾರೆ. ಶ್ರೀಲಂಕಾ ಸೇರಿ ಹಲವು ದೇಶಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಹಣ ದುರುಪಯೋಗ ಆಗಿದೆ. ಸಿಬಿಐ, ಇಡಿ ತನಿಖೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತನಿಖಾ ಸಂಸ್ಥೆಗಳು ರಾಜಕೀಯ ವೈಷಮ್ಯಕ್ಕೆ ಬಳಕೆ ಆಗುತ್ತಿವೆ. ಆಮ್‌ಆದ್ಮಿ ಪಕ್ಷವನ್ನು ಮುಗಿಸಲು ಈ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು.ಆದರೆ, ಅದಾನಿ ವಿರುದ್ಧ ಯಾವ ತನಿಖೆ, ಪ್ರಕರಣ ಕೂಡ ದಾಖಲು ಮಾಡಿಲ್ಲ ಎಂದ ಅವರು ರಾಜ್ಯ ಮತ್ತು ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಗಳ ಅಗತ್ಯವಿದೆ ಎಂದರು.
ಕರ್ನಾಟಕದಲ್ಲಿ ಜನರಿಗೆ ಉಚಿತ ಚಿಕಿತ್ಸೆ ಕೊಡುವ ನೆಪ ಹೇಳಿ ಬಿಜೆಪಿ ಸರ್ಕಾರ ನಮ್ಮ ಕ್ಲಿನಿಕ್‌ಗಳನ್ನು ಘೋಷಣೆ ಮಾಡಿತ್ತು. ಆದರೆ ಸರ್ಕಾರದ ಬಗ್ಗೆ ನಂಬಿಕೆ ಇಲ್ಲದ ಜನರು ಈ ಕ್ಲಿನಿಕ್‌ಗಳಿಗೆ ಹೋಗುತ್ತಿಲ್ಲ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕುಟುಂಬ ರಾಜಕಾರಣಕ್ಕೆ ಬೇಸತ್ತ ಜನರು ರಾಜ್ಯದ ಮೂರು ಉಪಚುನಾವಣೆಗಳಲ್ಲೂ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇಂದು ಎಲ್ಲೆಡೆ ಇರುವ ಕುಟುಂಬ ರಾಜಕಾರಣ, ಅಧಿಕಾರ ಕೇಂದ್ರೀಕರಣ ದೂರವಾಗಬೇಕು. ಭ್ರಷ್ಟಾಚಾರ ತೊಲಗಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನನೆಗುದಿಗೆ ಬಿದ್ದಿದೆ. ಅಧಿಕಾರ ಕೇಂದ್ರೀಕೃತವಾಗಿದೆ. ಪ್ರಧಾನಿ ಅಭಿಲಾಷೆ ಯಂತೆ ಏಕ ವ್ಯಕ್ತಿ, ಏಕ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಕೇಜ್ರಿವಾಲ್ ರೀತಿಯ ಕಾಳಜಿ ಇತರ ರಾಜಕೀಯ ಪಕ್ಷಗಳಿಗೆ ಇಲ್ಲ. ದರೋಡೆ ಮಾಡುವ ಮೂರೂ ಪಕ್ಷಗಳು ಜನರ ಹಿತ ಮರೆತಿವೆ ಎಂದು ದೂರಿದರು.
ಗ್ಯಾರಂಟಿ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಮಹಿಳೆಯರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಪಡಿತರಚೀಟಿ ರದ್ದು ಮಾಡುತ್ತಿದೆ. ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಭ್ರಷ್ಟಾಚಾರದ ವಿಕೇಂದ್ರೀಕರಣ ನಡೆಯುತ್ತಿದೆ. ಮುಡಾ ಹಗರಣಕ್ಕೆ ಮುಖ್ಯಮಂತ್ರಿ ಬಲಿಯಾಗುವ ಸಾಧ್ಯತೆ ಇದೆ ಎಂದರು.
ಈಗಿನ ಸರ್ಕಾರದಲ್ಲಿ ಶೇ 50 ರಷ್ಟು ಕಮಿಷನ್ ಇರುವ ಗುಮಾನಿ ಇದೆ. ಉಳ್ಳವರಿಗೆ ಭೂಮಿ ಸಿಗುತ್ತಿದೆ. ಬೆಂಗಳೂರು ಸುತ್ತ ರೈತರು ಭೂಮಿ ಹೊಂದಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಭೂ ಕಾಯ್ದೆ ತಿದ್ದುಪಡಿ ತಂದು ಭೂಕಬಳಿಕೆ ಮಾಡಲಾಗಿದೆ. ಶಾಸಕ, ಸಂಸದರಲ್ಲಿ ಅಸಂಸದೀಯ ಟೀಕೆ ಒಳ್ಳೆಯದಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಪ್ರಧಾನ ಕಾರ್ಯದರ್ಶಿ, ಬಸವರಾಜ, ಕುಮಾರಪ್ಪ, ಉಷಾ ಇತರರಿದ್ದರು.