ಭದ್ರಾ ಡ್ಯಾಂ ಬಳಿ ಕಾಮಗಾರಿಗೆ ವಿರೋಧ ಬಿ.ಆರ್. ಪ್ರಾಜೆಕ್ಟ್‌ನಲ್ಲಿ ರೈತರ ಪ್ರತಿಭಟನೆಗೆ ಕ್ಷಣಗಣನೆ

1000963746.jpg
Published on

ದಾವಣಗೆರೆ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ 346 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ 172 ಹಳ್ಳಿಗಳಿಗೆ ಭದ್ರಾ ಡ್ಯಾಂನಿಂದ ನೀರು ಪೂರೈಸುವ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದನ್ನು ಕೈಬಿಡುವಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಆಗ್ರಹಿಸಿದೆ.

ಈ ಬೇಡಿಕೆ ಸಂಬಂಧ, ಬಿ.ಆರ್. ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರಿನ ಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಸೋಮವಾರ ನಡೆಸಲು ನಿರ್ಧರಿಸಲಾಗಿದ್ದು. ರೈತರು ರೊಟ್ಟಿ-ಬುತ್ತಿ ಸಹಿತ ಭಾಗವಹಿಸಬೇಕೆಂದು ಒಕ್ಕೂಟದ ಮುಖಂಡರಾದ ಸತೀಶ್ ಕೊಳೇನಹಳ್ಳಿ, ಎಂ. ಬಸವರಾಜನಾಯ್ಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಮಗಾರಿ ನಡೆಯುವ ಸ್ಥಳ ಬಫರ್ ಜೋನ್ ಆಗಿದ್ದು, ಕಾಮಗಾರಿ ಕೈಗೊಂಡಲ್ಲಿ ಜಲಾಶಯದ ಅಭದ್ರತೆ ಕಾರಣವಾಗಲಿದೆ.

ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಜನರ ಜೀವನಾಡಿ. ಬಲದಂಡೆ ನಾಲೆ ಮೂಲಕ ಜಿಲ್ಲೆಗೆ ನೀರು ಪೂರೈಕೆ ಆಗುತ್ತದೆ. ಕಲ್ಲು ಗುಡ್ಡದ ನಡುವೆ ಹಾದು ಬಂದಿರುವ ಈ ನಾಲೆಯನ್ನು ಸೀಳಿ ಹೊಡೆದು ಹೊಸದುರ್ಗ-ತರೀಕೆರೆ-ಅಜ್ಜಂಪುರ ತಾಲ್ಲೂಕಿನ ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್ ಅಳವಡಿಸಲಾಗುತ್ತಿದೆ ಇದು ಸರಿಯಲ್ಲ ಎಂದರು.

ಬಫರ್ ಜೋನ್ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು ಜಲಾಶಯದ ಅಭದ್ರತೆ ಕಾರಣವಾಗಲಿದೆ. ನಾಲೆ ಮಟ್ಟದಿಂದ 8 ಅಡಿ ಕೆಳಮಟ್ಟದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ನೀರು ಸರಾಗವಾಗಿ ಮತ್ತು ರಭಸವಾಗಿ ಹರಿಯುವಂತೆ ಮಾಡುವ ಚಾಣಾಕ್ಷ ತಂತ್ರ ಮಾಡಲಾಗಿದೆ.

ಈ ಪೈಪು ಭದ್ರಾ ನಾಲೆಗಿಂತ 8 ಅಡಿ ಕೆಳಮಟ್ಟದಲ್ಲಿ ಇರುವುದರಿಂದ ಸಹಜವಾಗಿ ನೀರು ನಮ್ಮ ಜಿಲ್ಲೆಯ ಕಡೆಗೆ ಹರಿಯುವುದಿಲ್ಲ. ಆಗ ಜಿಲ್ಲೆಯ ರೈತರು ಭತ್ತದ ನಾಟಿ ಮಾಡುವುದಿರಲಿ, ಇರುವ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಜಿಲ್ಲೆಯ ರೈತರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಜಿಲ್ಲೆಯ ರೈತರೊಂದಿಗೆ ಹುಡುಗಾಟವಾಡುತ್ತಿದೆ. ಭದ್ರಾ ನೀರು ನಂಬಿದ ರೈತರನ್ನು ವಂಚಿಸಿ, ಅವರ ಕತ್ತು ಹಿಸುಕುವ ಅಮಾನವೀಯ ಕೃತ್ಯ ಇದಾಗಿದೆ. ಸುಮಾರು 1600 ಕೋಟಿ ರೂ. ಅಂದಾಜಿನ ಕಾಮಗಾರಿ ಕೈಗೊಳ್ಳುವ ಮುನ್ನ ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ-ರೈತರೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ದೂರಿದರು.

ಹೊಸದುರ್ಗ-ತರೀಕೆರೆ-ಅಜ್ಜಂಪುರ ತಾಲೂಕುಗಳಿಗೆ ಹಿರಿಯೂರಿನ ವಾಣಿವಿಲಾಸ ಡ್ಯಾಂ ಸಮೀಪವಾಗಿದ್ದು, ದೂರದ ಭದ್ರಾ ಡ್ಯಾಂ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ಸೋಜಿಗದ ಸಂಗತಿಯಾಗಿದೆ. ಹೊಸದುರ್ಗ-ತರೀಕೆರೆ-ಅಜ್ಜಂಪುರ ತಾಲೂಕುಗಳ ಹಳ್ಳಿಗಳ ಕಡೆಯಿಂದ ಮೊದಲು ಆರಂಭವಾಗಬೇಕಿದ್ದ ಕಾಮಗಾರಿ ಭದ್ರಾ ಡ್ಯಾಂ ಬುಡದಿಂದ ಶುರುವಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಅಡಗಿದೆ ಎಂದು ಹೇಳಿದರು.

ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಡ್ಯಾಂ ತಳಭಾಗದ ಬಫರ್‌ಜೋನ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಕಳೆದ ಎರಡು ವರ್ಷಗಳಿಂದ ಜಿಲ್ಲಾ ರೈತರ ಒಕ್ಕೂಟದಿಂದ ಸರ್ಕಾರಕ್ಕೆ ಆಗ್ರಹಿಸಿದ್ದರೂ ಸರ್ಕಾರ ಮೌನ ತಾಳಿದೆ. ಹೀಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೆಬಾಳ್, ರಾಮಪುರದ ನರೇಂದ್ರಗೌಡ್ರು, ಕಾಶೀಪುರದ ಎಚ್.ಟಿ.ಮಲ್ಲಿಕಾರ್ಜುನ, ಹಾಲೇಶನಾಯಕ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net