ಸಂಸದರ ಮನೆ ಬಳಿ ರೈತರ ಪ್ರತಿಭಟನೆ

1000547241.jpg
Published on

ದಾವಣಗೆರೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಗೆ ಒತ್ತಾಯಿಸಿ ನವದೆೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಬೆಂಬಲಿಸಿ ರಾಜ್ಯ ರೈತ ಸಂಘ ಹಸಿರುಸೇನೆ ಸದಸ್ಯರು ಸೋಮವಾರ ಸಂಸದರ ಮನೆ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರೈತರ ಮೇಲಿನ ದೌರ್ಜನ್ಯವನ್ನು ಖಂಡಿಸಿದರು.
ರೈತರ ಬೆಳೆಗಳಿಗೆ ಎಂಎಸ್‌ಪಿ ನಿಗದಿಪಡಿಸುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಕೇಂದ್ರ ಸರ್ಕಾರದ ಈ ನಡೆ ವಿರೋಧಿಸಿ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ನವದೆಹಲಿಯಲ್ಲಿ ಚಳವಳಿ ನಡೆದಿತ್ತು. ಆಗ 800ಕ್ಕೂ ಅಧಿಕ ರೈತರು ಪ್ರಾಣ ಕಳೆದುಕೊಂಡಿದ್ದರು  ಎಂದು ಹೇಳಿದರು.
ಸರ್ಕಾರದ ಮೇಲಿನ ವಿಶ್ವಾಸವನ್ನು ರೈತರು ಕಳೆದುಕೊಂಡಿದ್ದಾರೆ. ಕೃಷಿ ವಲಯಕ್ಕೆ ಸಿಗುತ್ತಿದ್ದ ಆದ್ಯತೆ ಕಡಿಮೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕವೂ ರೈತರ ಚಳವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬಲಪ್ರಯೋಗದ ಮೂಲಕ ಚಳವಳಿ ಮುರಿಯಲು ಪ್ರಯತ್ನ ನಡೆಸಿದೆ. ಇದನ್ನು ರಾಜ್ಯದ ರೈತರು ಖಂಡಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಸಂಸದರು ಅನ್ನದಾತರ ಸಮಸ್ಯೆಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ರೈತರ ಹೋರಾಟವನ್ನು ಬೆಂಬಲಿಸಬೇಕು ಎಂದು ಆಗ್ರಹಿಸಿದರು. ನಂತರ ಸಂಸದರ ಕಚೇರಿಯ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಂಪುರ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಹೆಬ್ಬಾಳು ರಾಜಯೋಗಿ, ಮುಖಂಡರಾದ ನಗರನಹಳ್ಳಿ ಚೌಡಪ್ಪ, ಮಿಯಾಪುರ ತಿರುಮಲೇಶ್, ಅಂಜಿನಪ್ಪ ಪೂಜಾರ್, ದಶರಥ, ನಾಗರಕಟ್ಟೆ ಜಯನಾಯ್ಕ, ಬೆಳವನೂರು ಕರಿಬಸಪ್ಪ, ಸಾಣೇಕೆರೆ ಗುರುಮೂರ್ತಿ, ಆರ್.ಎಚ್, ಪ್ರತಾಪ್ ಇತರರಿದ್ದರು.
ಇ-ಸ್ವತ್ತು ನೀಡಲು ತಾತ್ಸಾರ:
ಜಿಲ್ಲೆಯಲ್ಲಿ ಎಲ್ಲ ತಾಲೂಕಿನ ಗ್ರಾಪಂಗಳಲ್ಲಿ ಇ-ಸ್ವತ್ತು ನೀಡಲು ವಿಳಂಬ, ತಾತ್ಸಾರ ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಿಂದಲೂ ಈ ಧೋರಣೆ ನಡೆದಿದೆ. ಕೂಡಲೆ ಜಿಪಂ ಸಿಇಒ, ತಾಪಂ ಇಒಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ ಐತರು ಇದೇ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಗೃಹಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net