ಜಗಳೂರು ತಲುಪಿದ ರೈತರ ಪಾದಯಾತ್ರೆ

1000639041.jpg
Published on

ದಾವಣಗೆರೆ: ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕೆಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಿಂದ ರಾಜ್ಯ ರೈತ ಸಂಘ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಯಡಿ ರೈತರು ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಜಗಳೂರು ತಲುಪಿತು.
ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ ಅರಣ್ಯ ಇಲಾಖೆ ಮತ್ತು ತಹಸೀಲ್ದಾರ್ ದೌರ್ಜನ್ಯ ವಿರೋಧಿಸಿ ಗಡಿಮಾಕುಂಟೆಯಿಂದ ಪಾದಯಾತ್ರೆ ಆರಂಭಿಸಿದ್ದು  ಸೋಮವಾರ ಜಗಳೂರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಗೌಡಗೊಂಡನಹಳ್ಳಿಯ 23 ಕುಟುಂಬಗಳು ಅರಣ್ಯ ಹಕ್ಕು ಸಮಿತಿಗೆ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕಸವನಹಳ್ಳಿಯ ಪಿಡಿಒ ವಿಲೇ ಮಾಡಿಲ್ಲ.  ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಜಗಳೂರು ತಾಲೂಕಿನಲ್ಲಿ ತಿರಸ್ಕರಿಸಿರುವ  ಫಾರಂ ನಂ 53 ಮತ್ತು 57 ಅರ್ಜಿಗಳನ್ನು ಮರುಪರಿಶೀಲನೆ ಮಾಡಬೇಕು. ಒಂದು ವೇಳೆ ಫಾರಂ 57 ಅರ್ಜಿ ವಜಾ ಮಾಡಿ ಭೂಮಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಒಂದು ಇಂಚು ಭೂಮಿ ಕೂಡ ನೀಡುವುದಿಲ್ಲ.  ತಾಲೂಕಿನಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಹೊನ್ನಾಳಿ ತಾಲೂಕಿನಲ್ಲಿ ಪಿಎಂ ಕುಸುಮ ಯೋಜನೆಯಡಿ ರೈತರ ಭೂಮಿ ಕಸಿದು ಉದ್ಯಮಿಗೆ ನೀಡಲಾಗಿದೆ. ಇದರಿಂದ ನೊಂದ ರೈತ ವಿಷ ಕುಡಿದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಭವಿಷ್ಯದಲ್ಲಿ ಅರಣ್ಯ ಇಲಾಖೆ ಈ ರೀತಿಯ ಘಟನೆಗಳಿಗೆ ಅವಕಾಶ ಮಾಡಿಕೊಡದೆ ಅರ್ಜಿ ಸಲ್ಲಿಸಿರುವ ಎಲ್ಲ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ಗೌಡಗೊಂಡನಹಳ್ಳಿ ಮತ್ತು ಚಿಕ್ಕಉಜ್ಜಿನಿ ಗ್ರಾಮದ ರೈತರು ಭಾಗವಹಿಸಿದ್ದರು. ಮುಖಂಡರಾದ ಚಿಕ್ಕಮಲ್ಲನಹೊಳೆ ಚಿರಂಜೀವಿ, ಬೈರನಾಯಕನಹಳ್ಳಿ ರಾಜು, ಕಸವನಹಳ್ಳಿ ನಾಗರಾಜ್, ಸತೀಶ್, ಹನುಮಂತಾಪುರದ ರಂಗನಾಥ್ ಭಾಗವಹಿಸಿದ್ದರು. ಜಗಳೂರಿನಿಂದ ನಾಳೆ ಹೊರಡಲಿರುವ ಪಾದಯಾತ್ರೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಸಂಚರಿಸಲಿದೆ.
----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net