ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

1001279654.jpg
Published on

ದಾವಣಗೆರೆ: ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ ಬಣದ ಜಿಲ್ಲಾ ಸಮಿತಿ ಕಾರ್ಯಕರ್ತರು, ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು ಡಿಸಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ರೈತರು ಬೆಳೆದ ಭತ್ತ, ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಹೊರಗಿನ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದುದಾರರು 1500 ರಿಂದ 1800 ರೂ. ಗೆ ಕ್ವಿಂ.ಮೆಕ್ಕೆಜೋಳ ಹಾಗೂ 1700 ರಿಂದ 1900 ರೂ.ಗೆ ಭತ್ತವನ್ನು ಖರೀದಿಸುತ್ತಿದ್ದಾರೆ.

ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2500 ರೂ.ನಿಂದ 3 ಸಾವಿರ ರೂ., ಭತ್ತಕ್ಕೆ 3 ಸಾವಿರ ರೂ.ನಿಂದ 3500 ರೂ. ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಲು ಜಿಲ್ಲಾಡಳಿತ ಗಮನ ಹರಿಸಬೇಕು. ಹೊರ ಮಾರುಕಟ್ಟೆಯಲ್ಲಿ ದರ ಕುಸಿತ ಮುಂದುವರಿದಲ್ಲಿ, ಕಡಿಮೆ ಬೆಲೆಗೆ ಖರೀದಿ ನಡೆದಲ್ಲಿ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.

2024ರಲ್ಲಿ ಖರೀದಿ ಕೇಂದ್ರ ಆರಂಭ ಮಾಡುವುದಾಗಿ ಜಿಲ್ಲಾಡಳಿತ ಸುಳ್ಳು ಭರವಸೆ ನೀಡಿ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡಿತ್ತು. ಈ ಬಾರಿಯಾದರೂ ರೈತರಿಗೆ ಅನ್ಯಾಯ ಆಗದಂತೆ ಗಮನ ಹರಿಸಬೇಕು. ರೈತರು ಸಾಲ ಮಾಡಿ ತೀರಿಸಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಈಗಲಾದರೂ ಸ್ಪಂದಿಸಿ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಕೃಷಿ ಅಧಿಕಾರಿಗಳ ಮನೆ ಬಳಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್, ಪ್ರಧಾನ ಕಾರ್ಯದರ್ಶಿ ದೊಣೆಹಳ್ಳಿ ಲೋಕಣ್ಣ, ಸಿದ್ದಪ್ಪನಾಯಕ ಹುಚ್ಚವ್ವನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ಭಗತ್‌ಸಿಂಹ, ದಾವಣಗೆರೆ ತಾಲೂಕು ಅಧ್ಯಕ್ಷ ಕೆಂಚಮ್ಮನಹಳ್ಳಿ ಹನುಮಂತಪ್ಪ, ಸುನಿಲ್ ವಟಿಗನಹಳ್ಳಿ, ಭರಮಸಮುದ್ರ ಕುಮಾರ್, ಉಚ್ಚೆಂಗಪ್ಪ ಕೋಲ್ಕುಂಟೆ, ನೀರ್ಥಡಿ ಭೀಮಣ್ಣ, ದೊಡ್ಡಬೊಮ್ಮನಹಳ್ಳಿ ಬಸವರಾಜ್, ಪುಟ್ಟಪ್ಪ, ಮಲ್ಲಿಕಪ್ಪ ಚಿಕ್ಕತೊಲಗೇರಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net