

ದಾವಣಗೆರೆ: ತಾಲೂಕಿನ ಗುಡಾಳು ಗೊಲ್ಲರಹಟ್ಟಿ ಗ್ರಾಮದ ರೈತ ಹನುಮಂತಪ್ಪ (40) ಸಾಲ ತೀರಿಸಲಾಗದೆ ಬೇಸತ್ತು ಭಾನುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ಅಳವಡಿಸಿದ್ದ ಹೈಟೆನ್ಷೆನ್ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನಿಗೆ ವಿಕಲಾಂಗ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ದಾವಣಗೆರೆ ಚಾಮರಾಜಪೇಟೆಯ ಬ್ಯಾಂಕ್ ಶಾಖೆಯಲ್ಲಿ 4 ಲಕ್ಷ ರೂ.ಗಳ ಮನೆ ಸಾಲ ಹಾಗೂ 3.5 ಲಕ್ಷ ರೂ.ಗಳ ಕುರಿ ಸಾಲ ಪಡೆದಿದ್ದರು. ಇದರ ಜತೆಗೆ ಬೆಳೆ ಸಾಲ ಮಾಡಿದ್ದರು. ಬ್ಯಾಂಕ್ ಅಧಿಕಾರಿಗಳ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಬಳಿಕ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ರೈತನ ಸಾವಿಗೆ ಕಾರಣರಾದ ಬ್ಯಾಂಕ್‌ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗದ ಹೊರತಾಗಿ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಎಡಿಸಿ ಸೈಯದ್ ಆಫ್ರೀನ್‌ಬಾನು ಬಳ್ಳಾರಿ ಹಾಗೂ ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್ ಹಾಗೂ ಹೆಚ್ಚುವರಿ ಎಸ್ಪಿ ಸಂತೋಷ್ ವಿಜಯಕುಮಾರ್ ಪ್ರತಿಭಟನೆ ನಿರತ ರೈತರ ಮನವೊಲಿಸಲು ಯತ್ನಿಸಿದರೂ ಫಲ ನೀಡಲಿಲ್ಲ.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ಮಾಡಿ ಸೋಮವಾರ ಬೆಳಗ್ಗೆ ಸಭೆ ನಡೆಸಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಶವಾಗಾರದ ಶೈತ್ಯಾಗಾರದಲ್ಲಿ ಐತನ ಮೃತದೇಹ ಇರಿಸಿರುವ ರೈತರು ನ್ಯಾಯ ಸಿಗದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಘಟನೆ ವಿವರ:
ಮನೆ ಸಾಲವನ್ನು ಹನುಮಂತಪ್ಪ ಕಂತು ರೂಪದಲ್ಲಿ ಕಟ್ಟುತ್ತಿದ್ದರು. ಏಕಅವಧಿಯಲ್ಲಿ ಸಾಲ ತೀರುವಳಿಗೆ ಮನವಿ ಮಾಡಿದ್ದರು.
ಅದರಂತೆ ನಿಗದಿಪಡಿಸಿದ್ದ 2.10 ಲಕ್ಷ ರೂ. ತುಂಬಲು ಹೋದಾಗ ಮನೆ ಮೇಲಿನ ಸಾಲ ತೀರಿಸಿದಲ್ಲಿ ಮಾತ್ರವೇ ಕುರಿ ಸಾಲದ ಕಂತು ಕಟ್ಟಿಸಿಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು.
ಈ ನಡುವೆಯೇ ಮನೆ ಜಪ್ತಿ ಆದೇಶಕ್ಕೆ ಅನುಮತಿ ಪಡೆದಿದ್ದರು ಎನ್ನಲಾದ ಬ್ಯಾಂಕ್ ವ್ಯವಸ್ಥಾಪಕ, ರೈತನ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರು. ಇದರಿಂದ ಬೆದರಿದ್ದ ಹನುಮಂತಪ್ಪ ರಾಜ್ಯ ರೈತ ಸಂಘ ಹಸಿರುಸೇನೆ ಮೊರೆ ಹೋಗಿದ್ದರು.
ಜಿಲ್ಲಾಧಿಕಾರಿಗಳಿಂದ ಪಡೆದ ಆದೇಶದಂತೆ ಮನೆ ಜಪ್ತಿ ಮಾಡುವುದಾಗಿ ಎಜೆಎಂ ಶಿವಪ್ರಸಾದ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ತಂಡಕ್ಕೆ ತಿಳಿಸಿದ್ದರು. ಕುರಿ ಸಾಲದ ಹೆಸರಲ್ಲಿ ಮನೆ ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಯೋಜಿಸಿದ್ದರು. ಮಾತುಕತೆಯಂತೆ ಮನೆ ಮತ್ತು ಕುರಿ ಸಾಲ ಮರುಪಾವತಿಗೆ ಒಪ್ಪಿಕೊಂಡಿದ್ದ ಹನುಮಂತಪ್ಪ ಅವರ ಬಳಿ ಹಣ ಇರಲಿಲ್ಲ.
ಈ ಪ್ರಕರಣ ಅಜಾಗರೂಕತೆಯಿಂದ ಆಗಿದ್ದು, ಜಪ್ತಿ ಆದೇಶ ವಾಪಾಸು ಪಡೆಯುವುದಾಗಿ ರೈತ ಮುಖಂಡರ ಬಳಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಪ್ರತಿಕ್ರಿಯಿಸಿದ್ದರು. ನಂತರ ರೈತ ಹನುಮಂತಪ್ಪ ಅರ್ಜಿ ನೀಡಿದ್ದರಾದರೂ ಬ್ಯಾಂಕ್ ಅಧಿಕಾರಿಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಭಾನುವಾರ ನೇಣಿಗೆ ಶರಣಾದರು.
ನಂತರ ಶವಾಗಾರದ ಬಳಿ ರೈತರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಗುಮ್ಮನೂರು ಶಂಭಣ್ಣ, ನಿಟುವಳ್ಳಿ ಆಂಜಿನಪ್ಪ ಪೂಜಾರ್, ಹುಚ್ವವ್ವನಹಳ್ಳಿ ಪ್ರಕಾಶ್, ಗುಮ್ಮನೂರು ಲೋಕೇಶ್, ರುದ್ರೇಶ್, ಹೂವಿನಮಡು ನಾಗರಾಜ್, ಕುರ್ಕಿ ಹನುಮಂತ, ರಾಜನಹಟ್ಟಿ ರಾಜು,
ಯಲೋದಹಳ್ಳಿ ರವಿ, ಅಸ್ತಾಪನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ್, ಹರಪನಹಳ್ಳಿ ಪರಶುರಾಮ್, ಶಿವಪುರ ಕೃಷ್ಣಮೂರ್ತಿ, ಮ್ಯಾಸರಹಳ್ಳಿ ಪ್ರಭು ಇತರರಿದ್ದರು.