ರೈತರ ಮನೆ ಬಾಗಿಲಿಗೆ ಅಧಿಕಾರಿಗಳು

1000544361.jpg
Published on

ದಾವಣಗೆರೆ: ಕೃಷಿ - ಕಂದಾಯ ಅಧಿಕಾರಿಗಳು ಸಲಹೆ ಹಾಗೂ ಸೌಲಭ್ಯಗಳನ್ನು ಹೊತ್ತು ಗ್ರಾಮೀಣ ರೈತರ ಮನೆ ಬಾಗಿಲಿಗೆ ತೆರಳಿ ಅರಿವು ಮೂಡಿಸಲು ಸೂಚಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಆನಗೋಡು ಬಳಿ ಉಳುಪಿನಕಟ್ಟೆ ತಿರುವಿನಲ್ಲಿರುವ ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ರೈತಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೃಷಿಯಲ್ಲಿ ಖುಷಿ ಕಾಣಬೇಕು ಎಂದರೆ ರೈತರಿಗೆ ಕಾಲ,ಕಾಲಕ್ಕೆ ಸಲಹೆ, ಸಾಲ ಸೌಲಭ್ಯ ಮತ್ತು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಪ್ರತಿಪಾದಿಸಿದರು.
ಅಭಿವೃದ್ಧಿಯ  ದೂರದೃಷ್ಟಿ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಅಧಿಕಾರವಧಿ ಉದ್ದಕ್ಕೂ ರೈತಪರ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.
ರಾಜ್ಯ-ಕೇಂದ್ರ ಸರ್ಕಾರದ  ಅನುದಾನ-ಸವಲತ್ತು ಪಡೆಯಲು ರೈತರು ಚಳವಳಿಗಳ ಮೂಲಕ ಜನಪ್ರತಿನಿಧಿಗಳ,ಅಧಿಕಾರಿಗಳ ಕಣ್ಣು ತೆರೆಯಿಸಬೇಕು ಎಂದು ಅಭಿಪ್ರಾಯಪಟ್ಟರು.
 ಮುಂದಿನ ವರ್ಷ ಹೊಸ ಕಟ್ಟಡದಲ್ಲಿ ರೈತ ಹುತಾತ್ಮರ ದಿನ ಆಚರಿಸಬೇಕು. ಈ ಜಾಗದಲ್ಲಿ ಕೃಷಿ ಮೇಳಗಳು ಕೂಡ ಆಯೋಜನೆ ಆಗಬೇಕು ಎಂದು ಆಶಿಸಿದರು.
ಜಿಲ್ಲೆಯ ಎಲ್ಲ ಕಡೆ ಅಡಕೆ ಬೆಳೆ ರಾರಾಜಿಸುತ್ತಿದೆ.ಏಕರೂಪದ ಬೆಳೆ ಬದಲು ಸಮಗ್ರ ಕೃಷಿಯತ್ತ ಹೊರಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕೃಷಿಯ ಕನಸು
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೂ ಕೃಷಿ ಮಾಡುವ ಕನಸು ಇದೆಯಂತೆ ಮಗ ಸಮರ್ಥ್ ಜತೆ ಸೇರಿ ಸಮಗ್ರ ಕೃಷಿ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದರು.

ಹೊಸ ಪೈಪ್ ಲೈನ್ ಅಳವಡಿಕೆ
22 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಪೈಪ್‌ಲೈನ್‌ಗಳು ಕಳಪೆ ಇರುವ ಕಾರಣ ಹೊಸ ಪೈಪ್ ಲೈನ್ ಅಳವಡಿಸಿ ನೀರು ಹರಿಸಲು ಸಚಿವರು, ಶಾಸಕರ ಜತೆ ಸೇರಿ ಪ್ರಯತ್ನಿಸುತ್ತೇನೆ ಎಂದು ಡಾ. ಪ್ರಭಾ ತಿಳಿಸಿದರು. ಇದೇ ವೇಳೆ ಭದ್ರಾ ನಾಲೆಗಳ ಹೂಳೆತ್ತಲು ಹಾಗೂ ಜಮೀನುಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, ರೈತ ಭವನಕ್ಕೆ ಸಚಿವರು 40 ಲಕ್ಷ  ರೂ. ಹಾಗೂ ನಾನು 5 ಲಕ್ಷ  ರೂ. ಅನುದಾನ ನೀಡಿದ್ದೇನೆ ಮುಂದಿನ ದಿನ ಗಳಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.
ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ  ಬಿಡುಗಡೆ ಆಗಿದ್ದು ಟೆಂಡರ್ ಹಂತದಲ್ಲಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ರೈತಪರ-ಸಾಮಾಜಿಕ ಕೆಲಸ ಕಾರ್ಯಕ್ಕೆ ಸರ್ಕಾರದ ಅನುದಾನ ಕಾಯುತ್ತ ಕೂರದೆ ಆರ್ಥಿಕ ಸಹಾಯ ಹಸ್ತ ಚಾಚುವಂತೆ ರೈತರಿಗೆ ಸಲಹೆ ನಿಡಿದರು.
ಭೂಮಿಗೆ ಯಥೆೇಚ್ಛವಾಗಿ ರಾಸಾಯನಿಕ ಕಳೆ-ಕೀಟನಾಶಕ ಬಳಕೆಯಿಂದ   ನಿತ್ಯ ಸೇವಿಸುವ ಆಹಾರ ವಿಷವಾಗಿದೆ. ಹೀಗಾಗಿ ಸಮಗ್ರ ಸಾವಯವ ಕೃಷಿಯತ್ತ ಹೊರಳಬೇಕು ಎಂದು ತಿಳಿಸಿದರು.
ರೈತರೇ ಹಾಲು, ಹಣ್ಣು , ತರಕಾರಿ ಖರೀದಿಸಿ ತಿನ್ನುವ ಸ್ಥಿತಿ ಬಂದಿದೆ. ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ  ಆಹಾರ ಧಾನ್ಯ ತರಕಾರಿ ಬೇಳೆ, ಕಾಳು  ಬೆಳೆಯದ ಸ್ಥಿತಿಗೆ ಕೃಷಿ ಬಂದು ನಿಂತಿದೆ ಎಂದರು. ಮತದಾರ ಮೊದಲು ಸುಧಾರಿಸಿದರೆ ಪೂರ್ಣ ಭ್ರಷ್ಟಾ ಚಾರ ತೊಡೆದು ಹಾಕಬಹುದು ಎಂದು ತಿಳಿಸಿದರು.
ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟ ಸ್ವಾಮಿ ಮಾತನಾಡಿ,ರೈತ ಭವನಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ 40 ಲಕ್ಷ ರೂ. ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ  ಮನವಿ ಮಾಡಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಕರಿಬಸಪ್ಪ ಮಾತನಾಡಿದರು. ಸಮಿತಿ  ಗೌರವಾಧ್ಯಕ್ಷ ಎಚ್. ನಂಜುಂಡಪ್ಪ,  ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಶಾಮನೂರು ಲಿಂಗರಾಜ್, ಕಕ್ಕರಗೊಳ್ಳದ ಬಸವನ ಗೌಡ್ರು, ಕುಸುಮ ಶ್ರೇಷ್ಠಿ, ಹೊನ್ನನಾಯಕನಹಳ್ಳಿ ಮುರುಗೇಂದ್ರಪ್ಪ, ಅಕ್ಕಮಹಾದೇವಿ, ಬಸವರಾಜ್, ನಸ್ರುಲ್ಲಾ ,ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net