ವಿನೋಬನಗರ ಗಣೇಶನಿಗೆ ವಿದಾಯ  ಮಳೆಯಲ್ಲೂ ಭರ್ಜರಿ ಮೆರವಣಿಗೆ

pixlr_20240916004713497.jpg
Published on

ದಾವಣಗೆರೆ: ಟ್ರಾೃಕ್ಟರ್ ಚಲಾಯಿಸಿ ಸಾರಥ್ಯ ವಹಿಸಿದ್ದ ಸಚಿವರು, ಡಿಜೆಯಲ್ಲಿ ಮೊಳಗಿದ ಹಾಡುಗಳು, ಅದಕ್ಕೆ ತಕ್ಕಂತೆ ಹುಚ್ಚೆದ್ದು ಕುಣಿದ ಯುವಕರು, ಆಗಾಗ್ಗೆ ಸುರಿದ ಜೋರು ಮಳೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ಸರ್ಪಗಾವಲು..
ವಿನೋಬನಗರದ ಎರಡನೇ ಮುಖ್ಯರಸ್ತೆಯ ಶ್ರೀ ವೀರವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ ನೋಟಗಳಿವು.
ರೇಣುಕ ಯಲ್ಲಮ್ಮ ದೇವಿಯ ಹಿನ್ನೆಲೆಯುಳ್ಳ ಗಣೇಶನ ಉತ್ಸವ ಮೂರ್ತಿಯನ್ನು ಹೂವಿನಲಂಕಾರದಲ್ಲಿ ಟ್ರಾೃಕ್ಟರ್‌ನಲ್ಲಿ ಕೂರಿಸಲಾಗಿತ್ತು. ವಿಶೇಷ ಟೊಪ್ಪಿಗೆ ಧರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಾಹನ ಚಲಾಯಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಏಳನೇ ಕ್ರಾಸ್‌ವರೆಗೆ ಸಚಿವರೇ ಚಾಲನೆ ಮಾಡಿ, ನಂತರ ನಿರ್ಗಮಿಸಿದರು.
ಎರಡನೇ ಮುಖ್ಯರಸ್ತೆಯ ಮಸೀದಿ ಸಮೀಪಕ್ಕೆ ಮೆರವಣಿಗೆ ಬರುತ್ತಿದ್ದಂತೆ ಮುಸ್ಲಿಂ ಮುಖಂಡರು ಗಣೇಶ ಮೂರ್ತಿಗೆ ಮಾಲೆ ಅರ್ಪಿಸಿದರು. ಮಸೀದಿ ಸುತ್ತಮುತ್ತಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು. ಡ್ರೋಣ್ ಕ್ಯಾಮರಾ ಮೆರವಣಿಗೆಯ ಕ್ಷಣಗಳನ್ನು ಸೆರೆ ಹಿಡಿಯಿತು.
ಮೆರವಣಿಗೆ ಶುರುವಾದ ಅರ್ಧ ತಾಸಿನಲ್ಲಿ ಜೋರು ಮಳೆಯಾದರೂ ಯುವಕರ ಉತ್ಸಾಹ ಕುಂದಲಿಲ್ಲ. ಜೈ ಶ್ರೀರಾಮ್, ಬನಾಯೇಂಗೆ ಮಂದಿರ್, ಹಿಂದುಸ್ಥಾನ ಗೊತ್ತೇನೋ.. ಮೊದಲಾದ ಹಾಡುಗಳು ಮಾರ್ದನಿಸಿದವು. ಚಿಣ್ಣರೂ ಸೇರಿ ಯುವಕರು ನರ್ತಿಸಿದರು. ಕೈಯಲ್ಲಿ ಭಗವಾಧ್ವಜಗಳನ್ನು ಹಿಡಿದು ತಿರುಗಿಸಿದರು. ಕೆಲವರು ಪಿರಮಿಡ್ ಮಾದರಿಯಲ್ಲಿ ಹತ್ತುವ ಪ್ರಯತ್ನ ಮಾಡಿದರು.
ಡಿಜೆ ಅಬ್ಬರದ ನಡುವೆ ಡ್ರಮ್ಸ್ ಸೆಟ್, ನಂದಿಕೋಲು ಮೆರುಗು ಕುಂದಿತ್ತು. ಆಂಜನೇಯ ಮೂರ್ತಿ ಹಾಗೂ ಓಂಕಾರ ಸಂಕೇತ ಮಾದರಿಗಳು ಇತರೆ ಟ್ರಾೃಕ್ಟರ್‌ಗಳನ್ನು ಅಲಂಕರಿಸಿದ್ದವು. ಯುವಕರು-ಮುಖಂಡರು ಹಣೆ-ಕೊರಳಲ್ಲಿ ಕೇಸರಿ ಶಾಲು ಧರಿಸಿದ್ದರು. ಪಿಬಿ ರಸ್ತೆ ತಲುಪಿದ ಮೆರವಣಿಗೆ, ಸಂಗೊಳ್ಳಿ ರಾಯಣ್ಣ ವೃತ್ತ ಹಾದು ಬಾತಿ ಕೆರೆ ತಲುಪಿದ ನಂತರ ಗಣೇಶನನ್ನು ವಿಧ್ಯುಕ್ತವಾಗಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಪಾಲಿಕೆ ಸದಸ್ಯ ಎ.ನಾಗರಾಜ್, ಗಣೇಶ ಸಮಿತಿ ಅಧ್ಯಕ್ಷ ಗುರುನಾಥ ಬಾಬು, ನಾಗರಾಜು, ಬಿ.ಕೆ. ರಮೇಶ್, ನಾಗರಾಜಗೌಡ, ಮಂಜುನಾಥ, ಸತೀಶ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಜೊಳ್ಳಿ ಗುರು, ದೇವರಮನೆ ಶಿವರಾಜ್, ಸತೀಶ್ ಪೂಜಾರಿ, ಮಣಿ ಸರ್ಕಾರ್ ಇತರರು ಭಾಗಿಯಾಗಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net